ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ಬೆಂಗಳೂರು :ಪ್ರೀತಿಸಿದ ಯುವಕನಿಂದಲೇ ಯುವತಿ ಹತ್ಯೆಯಾದ ಘಟನೆ ಶನಿವಾರ ಸಂಜೆ ಬೇಗೂರು ಠಾಣಾ ವ್ಯಾಪ್ತಿಯ ನ್ಯೂ ಮೈಕೋ ಲೇಔಟ್ನಲ್ಲಿ ನಡೆದಿದೆ. ಕುಕ್ಕರ್ನಿಂದ ತಲೆಗೆ ಹೊಡೆದು ಕೇರಳ ಮೂಲದ ದೇವಾ (24) ಎಂಬಾಕೆಯನ್ನ ಆಕೆಯ ಪ್ರಿಯಕರ ವೈಷ್ಣವ್ (24) ಹತ್ಯೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸರು ನೀಡಿರುವ ಮಾಗಿತಿ ಪ್ರಕಾರ, ಆರೋಪಿ ವೈಷ್ಣವ್ ಮತ್ತು ಹುಡುಗಿ ದೇವಾ (24) ಕಾಲೇಜು ದಿನಗಳಿಂದಲೂ ಸ್ನೇಹಿತರಾಗಿದ್ದರು. ಇಬ್ಬರೂ ಕೇರಳ ಮೂಲದವರಾಗಿದ್ದು, ಉದ್ಯೋಗ ಅರಸಿ ಬೆಂಗಳೂರಿಗೆ ಒಟ್ಟಿಗೆ ಬಂದಿದ್ದರು ಎಂದು ತಿಳಿದು ಬಂದಿದೆ.
ಇವರಿಬ್ಬರು ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದವರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದುತ್ತಿದ್ದರು ಮತ್ತು ಪದವಿ ಮುಗಿದ ನಂತರ ಬೆಂಗಳೂರಿನಲ್ಲಿ ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದರು. ಮತ್ತು ಇವರಿಬ್ಬರ ಸಂಬಂಧದ ಬಗ್ಗೆ ಇಬ್ಬರ ಕುಟುಂಬಗಳಿಗೂ ಮೊದಲೇ ತಿಳಿದಿತ್ತು. ಬದುಕು ಸಾಗಿಸಲು ಹುಟ್ಟೂರು ತೊರೆದು ಬೆಂಗಳೂರಿಗೆ ಬಂದು ಇಲ್ಲಿನ ಎರಡು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು.
ಇತ್ತೀಚೆಗೆ ವೈಷ್ಣವ್ ದೇವಾಗೆ ಮತ್ತೊಬ್ಬ ಯುವಕನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಶಂಕೆ ವ್ಯಕ್ತಪಡಿಸಿದ್ದ. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಶನಿವಾರ ಸಂಜೆ ಇಬ್ಬರ ನಡುವೆ ಇದೇ ವಿಚಾರವಾಗಿ ಮತ್ತೆ ಜಗಳ ಶುರುವಾಗಿದೆ. ಕೋಪದ ಭರದಲ್ಲಿ ವೈಷ್ಣವ್, ದೇವಾಳನ್ನು ಬಿಗಿಯಾಗಿ ಹಿಡಿದುಕೊಂಡು, ಪ್ರೆಶರ್ ಕುಕ್ಕರ್ನಿಂದ ತಲೆಗೆ ಹೊಡೆದಿದ್ದಾನೆ. ಕುಕ್ಕರ್ನ ಬಲವಾದ ಏಟಿನಿಂದ ಯುವತಿ ದೇವಾ ಪ್ರಜ್ಞೆ ತಪ್ಪಿ ನೆಲದ ಮೇಲೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಡಿಸಿಪಿ ಹೇಳಿದ್ದಿಷ್ಟು:
’’ಕೇರಳ ಮೂಲದ ದೇವಾ ಹಾಗೂ ವೈಷ್ಣವ್ ಕಾಲೇಜು ದಿನಗಳಿಂದಲೇ ಪರಿಚಿತರು. ಒಟ್ಟಿಗೆ ವಿದ್ಯಾಭ್ಯಾಸ ಪೂರೈಸಿದ ಬಳಿಕ ಕಳೆದ ಮೂರು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದುಕೊಂಡು ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ಪ್ರೀತಿಯ ಬಗ್ಗೆ ಎರಡೂ ಕುಟುಂಬದವರಿಗೂ ತಿಳಿದಿತ್ತು. ಆದರೆ ಇತ್ತೀಚಿಗೆ ದೇವಾಳಿಗೆ ಬೇರೆ ಸಂಬಂಧವಿದೆ ಎಂದು ವೈಷ್ಣವ್ ಅನುಮಾನಿಸುತ್ತಿದ್ದ. ಅದೇ ವಿಚಾರವಾಗಿ ಶನಿವಾರ ಸಂಜೆ ಇಬ್ಬರ ನಡುವೆ ಗಲಾಟೆಯಾಗಿದೆ. ಪರಸ್ಪರ ಮಾತಿಗೆ ಮಾತು ಬೆಳೆದು, ಕೋಪಗೊಂಡ ವೈಷ್ಣವ್ ಪ್ರೆಶರ್ ಕುಕ್ಕರ್ನಿಂದ ದೇವಾಳ ತಲೆಗೆ ಬಲವಾಗಿ ಹೊಡೆದಿದ್ದ. ಪರಿಣಾಮ ದೇವಾ ಸಾವನ್ನಪ್ಪಿದ್ದಾಳೆ. ನಿನ್ನೆ ಸಂಜೆ 4;30 ಯಿಂದ 5:30 ವೇಳೆಗೆ ನಡೆದಿರುವ ಘಟನೆ ಇದಾಗಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬೇಗೂರು ಠಾಣಾ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’’ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ ಕೆ ಬಾಬಾ ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ಪತ್ನಿ, ಪ್ರಿಯಕರನ ಕೊಂದ ಪತಿ... ಜೋಡಿ ಕೊಲೆಗೆ ಬೆಚ್ಚಿಬಿದ್ದ ಗ್ರಾಮ