ಬೆಂಗಳೂರು:ಶಿವಾಜಿ ನಗರದ ಆಜಾಂ ಮಸೀದಿಯಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಆರೋಪಿಯನ್ನು ಶಿವಾಜಿ ನಗರ ಠಾಣಾ ಪೊಲೀಸರು ತೆಲಂಗಾಣದಲ್ಲಿ ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಸೈಯ್ಯದ್ ಮಹಮ್ಮದ್ ಅನ್ವರ್ (37) ಬಂಧಿತ ಆರೋಪಿ.
ಬಿಎಸ್ಸಿ ಪದವಿ ಮುಗಿಸಿದ ಈತ ಕೆಲಸ ಸಿಗದೆ ನಿರುದ್ಯೋಗಿಯಾಗಿದ್ದ. ಊರೂರು ಸುತ್ತಿ ಮಸೀದಿಗಳ ಬಳಿ ಚಂದಾ ಕೇಳುತ್ತಿದ್ದನಂತೆ. ಜುಲೈ 4ರಂದು ಬೆಂಗಳೂರಿಗೆ ಬಂದಿದ್ದ. ಜು.5ರಂದು ಆರೋಪಿ ಶಿವಾಜಿ ನಗರದ ರಸೆಲ್ ಮಾರ್ಕೆಟ್ ಹಿಂಭಾಗದಲ್ಲಿರುವ ಆಜಾಂ ಮಸೀದಿ ಬಳಿ ಬದು ಚಂದಾ ಪಡೆದಿದ್ದ. ರಾತ್ರಿ ಮಸೀದಿಯಲ್ಲಿ ತಂಗಲು ಅವಕಾಶ ಕೇಳಿದ್ದಾನೆ. ಇದಕ್ಕೆ ಮಸೀದಿ ಸಿಬ್ಬಂದಿ ಅವಕಾಶ ನೀಡಲಿಲ್ಲ. ಇದರಿಂದ ಬೇಸರಗೊಂಡಿದ್ದ ಆರೋಪಿ ಮೆಜೆಸ್ಟಿಕ್ಗೆ ತೆರಳಿ ಕರ್ನೂಲ್ ಬಸ್ ಹತ್ತಿದ್ದಾನೆ. ಬಸ್ ಬೆಂಗಳೂರು ಹೊರವಲಯದ ದೇವನಹಳ್ಳಿ ದಾಟುತ್ತಿದ್ದಂತೆ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಆಜಾಂ ಮಸೀದಿಯಲ್ಲಿ ಬಾಂಬ್ ಇಟ್ಟಿದ್ದಾರೆ ಎಂದು ಬಡಬಡಿಸಿದ್ದ.
ತಕ್ಷಣ ಎಚ್ಚೆತ್ತ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಇಂಚಿಂಚೂ ಪರಿಶೀಲಿಸಿದಾಗ ಯಾವುದೇ ಬಾಂಬ್ ಇಲ್ಲ, ಇದೊಂದು ಹುಸಿ ಬಾಂಬ್ ಕರೆಯೆಂದು ಖಚಿತವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದರು. ಕರೆ ಮಾಡಲಾದ ನಂಬರ್ ಲೊಕೇಶನ್ ಆಧರಿಸಿ ಆಂಧ್ರಕ್ಕೆ ತೆರಳಿದ್ದ ಶಿವಾಜಿ ನಗರ ಠಾಣಾ ಪೊಲೀಸರು ಬಳಿಕ ಕರ್ನೂಲ್ನಿಂದ ತೆಲಂಗಾಣದ ಮೆಹಬೂಬ್ ನಗರಕ್ಕೆ ತೆರಳಿದ್ದ ಆರೋಪಿ ಸೈಯ್ಯದ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.