ಬೆಂಗಳೂರು: ಬೆಳ್ಳಂದೂರಿನಲ್ಲಿರುವ ಐಬಿಡಿಒ ಕಂಪನಿಗೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತ್ತು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಹುಸಿ ಬಾಂಬ್ ಕರೆ ಎಂದು ಸ್ಪಷ್ಟಪಡಿಸಿದರು. ಬಳಿಕ ಕಂಪನಿಯ ಉದ್ಯೋಗಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಬೆಳ್ಳಂದೂರಿನ ಹೊರವರ್ತುಲ ರಸ್ತೆಯಲ್ಲಿರುವ ಕನ್ಸಲ್ಲೆನ್ಸಿ ಕಂಪೆನಿಯಾದ ಐಬಿಡಿಒಗೆ ಇಂದು ಬೆಳಗ್ಗೆ ಅನಾಮಿಕನೊಬ್ಬ ಕರೆ ಮಾಡಿ, ಬಾಂಬ್ ಇಡಲಾಗಿದೆ. ಕೆಲ ಹೊತ್ತಿನಲ್ಲಿ ಸ್ಪೋಟಗೊಳ್ಳಲಿದೆ ಎಂದು ಹೇಳಿ ಭಯದ ವಾತಾವರಣ ಸೃಷ್ಟಿಸಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಕಂಪೆನಿ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರೀಯ ದಳ ಹಾಗೂ ಪೊಲೀಸ್ ತಂಡ ದೌಡಾಯಿಸಿ ಮೂಲೆ-ಮೂಲೆಯಲ್ಲಿ ಜಾಲಾಡಿದ್ದಾರೆ. ನಂತರ ಹುಸಿ ಬಾಂಬ್ ಕರೆ ಎಂದು ಖಚಿತಪಡಿಸಿದ್ದಾರೆ.
ಬಾಂಬ್ ಕರೆ ಬಂದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಕಂಪೆನಿಯ ಮಾಜಿ ಉದ್ಯೋಗಿಯೇ ಕರೆ ಮಾಡಿರುವುದು ತಿಳಿದುಬಂದಿದೆ. ಕೆಟ್ಟ ನಡವಳಿಕೆಯ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಉದ್ಯೋಗಿಯಾಗಿದ್ದ ನವನೀತ್ ಪ್ರಸಾದ್ ಎಂಬಾತನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.
ಇದರಿಂದ ಆಕ್ರೋಶಗೊಂಡಿದ್ದ ಆತ ಕಂಪೆನಿಗೆ ಹುಸಿ ಬಾಂಬ್ ಕರೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಿಬ್ಬಂದಿ ನೀಡಿದ ದೂರು ಆಧರಿಸಿ ಬೆಳ್ಳಂದೂರು ಪೊಲೀಸರು ಪ್ರಕರಣ ದಾಖಲಿಸಿಕೊಂದ್ದು, ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.
ಇದನ್ನೂ ಓದಿ:Living Together: ರಾಜಧಾನಿಯ ನಿದ್ದೆಗೆಡಿಸಿದ ಲಿವಿಂಗ್ ಟುಗೆದರ್: ಕೆಲ ತಿಂಗಳಲ್ಲಿ ನಡೆದ ಸಂಗಾತಿಗಳ ಕೊಲೆಗಳು ಎಷ್ಟು?
ತಾಯಿ ಕೊಂದು ಸೂಟ್ಕೇಸ್ನಲ್ಲಿ ಶವ ತಂದು ಪೊಲೀಸರಿಗೆ ಶರಣಾದ ಪುತ್ರಿ:ಬೆಂಗಳೂರಿನಲ್ಲಿ 70 ವರ್ಷ ವಯಸ್ಸಿನ ತಾಯಿಯನ್ನು ಮಗಳೇ ಹತ್ಯೆ ಮಾಡಿದ್ದಾಳೆ. ಆ ಬಳಿಕ ಶವ ಸಮೇತ ಪೊಲೀಸ್ ಠಾಣೆಗೆ ಬಂದು ಶರಣಾಗಿರುವ ಘಟನೆ ಇಂದು ನಡೆದಿದೆ. ಸೆನಾಲಿ ಸೇನ್ (39) ತನ್ನ 71 ವರ್ಷ ವಯಸ್ಸಿನ ತಾಯಿ ಬೀವಾ ಪಾಲ್ನ ಕೊಲೆಗೈದ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ. ಮೂಲತಃ ಕೋಲ್ಕತ್ತಾದವರಾದ ಸೆನಾಲಿ, ಮಾಸ್ಟರ್ ಆಫ್ ಫಿಸಿಯೋಥೆರಪಿ ಓದಿಕೊಂಡಿದ್ದರು. ಮದುವೆಯಾಗಿದ್ದು ಓರ್ವ ಮಗ ಸಹ ಇದ್ದಾನೆ. ಸುಮಾರು ಆರು ವರ್ಷದಿಂದ ಮೈಕೋ ಲೇಔಟ್ ವ್ಯಾಪ್ತಿಯ ಖಾಸಗಿ ಅಪಾರ್ಟ್ಮೆಂಟಿನಲ್ಲಿ ಈಕೆ ವಾಸವಿದ್ದಳು. ತಂದೆಯ ಮರಣಾನಂತರ ತಾಯಿಯ ಜವಾಬ್ದಾರಿಯೂ ಸೆನಾಲಿಯ ಮೇಲಿತ್ತು.
ಆದರೆ, ಒಂದೇ ಮನೆಯಲ್ಲಿದ್ದ ಸೆನಾಲಿಯ ತಾಯಿ ಹಾಗೂ ಅತ್ತೆ ನಿತ್ಯ ಜಗಳವಾಡುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತಿದ್ದ ಸೆನಾಲಿ ಸ್ವತಃ ತಾನೇ ತಾಯಿಗೆ ನಿದ್ರೆ ಮಾತ್ರೆಗಳನ್ನು ನುಂಗಿಸಿದ್ದಾಳೆ. ನಿನ್ನೆ (ಸೋಮವಾರ) ರಾತ್ರಿ 11 ಗಂಟೆ ಸುಮಾರಿಗೆ ತಾಯಿ ಹೊಟ್ಟೆ ನೋವು ಅಂದಾಗ, ಆಸ್ಪತ್ರೆಗೆ ಸೇರಿಸಬೇಕಾದ ಮಗಳು ವೇಲ್ನಿಂದ ಆಕೆಯ ಕುತ್ತಿಗೆ ಬಿಗಿದು ಸಾಯಿಸಿದ್ದಾಳೆ. ಸೂಟ್ಕೇಸ್ನಲ್ಲಿ ಶವ ಇರಿಸಿ, ಅದರ ಜೊತೆಗೆ ತಂದೆಯ ಫೋಟೋ ಇರಿಸಿದ್ದಾಳೆ. ಕ್ಯಾಬ್ ಬುಕ್ ಮಾಡಿಕೊಂಡು ನೇರವಾಗಿ ಮೈಕೋ ಲೇಔಟ್ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಪ್ರಕರಣದ ತನಿಖೆ ಮುಂದುವರೆದಿದೆ.