ಬೆಂಗಳೂರು: ಮಧ್ಯಪ್ರದೇಶದ ಇಂದೋರ್ನಲ್ಲಿ ಹನಿಟ್ರ್ಯಾಪ್ ಕಿಂಗ್ ಪಿನ್ ಎಂದೇ ಕುಖ್ಯಾತಿಗೊಂಡು ಕೆಲವು ತಿಂಗಳುಗಳಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಕಳ್ಳತನ ಪ್ರಕರಣದಲ್ಲಿ ಮಹದೇವಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆರತಿ ದಯಾಳ್ ಬಂಧಿತ ಆರೋಪಿ. ಕಳ್ಳತನ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಜಯವಾಡದಲ್ಲಿ ಈಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈಕೆ ಕಳೆದ ಒಂದು ತಿಂಗಳ ಹಿಂದಷ್ಟೇ ಆರತಿ ನಗರಕ್ಕೆ ಬಂದಿದ್ದಳು. ಪಿಜಿಯೊಂದರಲ್ಲಿ ವಾಸವಾಗಿದ್ದ ವೇಳೆ ರೂಮ್ಮೇಟ್ಳ ಚಿನ್ನದ ಆಭರಣ ಕದ್ದು ಎಸ್ಕೇಪ್ ಆಗಿದ್ದಳು. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆಗೊಳಪಡಿಸಿದಾಗ ಆಕೆ ವಿರುದ್ಧ ಇಂದೋರ್ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವುದು ಗೊತ್ತಾಗಿದೆ. ಅಲ್ಲದೆ ತಲೆಮರೆಸಿಕೊಂಡಿರುವ ವಿಚಾರ ತಿಳಿದುಬಂದ ಹಿನ್ನೆಲೆಯಲ್ಲಿ ಮಧ್ಯ ಪ್ರದೇಶ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
ಮಹಿಳೆ ಮೇಲೆ ಹಲವು ಆರೋಪ:ರಾಜಕೀಯ ನಾಯಕರು ಸೇರಿದಂತೆ ಹಲವರನ್ನು ಹನಿಟ್ರ್ಯಾಪ್ ಮೂಲಕ ವಂಚಿಸಿದ್ದ ಪ್ರಕರಣದಲ್ಲಿ ಇವಳು ಕಿಂಗ್ಪಿನ್ ಎಂಬ ಆರೋಪ ಕೇಳಿಬಂದಿತ್ತು. ರಾಜಕೀಯ ಮುಖಂಡರನ್ನು ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿಸಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದಳು ಎಂಬ ಆರೋಪಗಳು ಈಕೆಯ ಮೇಲಿದ್ದವು.