ಬೆಂಗಳೂರು: ಕುಂಟ ಎಂದು ಛೇಡಿಸಿದಕ್ಕೆ ಯುವಕನನ್ನು ಕರೆದೊಯ್ದು ಸ್ನೇಹಿತರೇ ಹಾಲೋಬ್ಲಾಕ್ ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದು ಈ ಸಂಬಂಧ ಇಬ್ಬರು ಆರೋಪಿಗಳನ್ನ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ. ಅನ್ನಪೂರ್ಣೇಶ್ವರಿ ನಗರದ ಚಾಮುಂಡೇಶ್ವರಿ ಬಾರ್ ಬಳಿ ನಿನ್ನೆ ರಾತ್ರಿ ವಿಜಯ್ ಕುಮಾರ್ ಎಂಬಾತನನ್ನು ಹತ್ಯೆಗೈಯಲಾಗಿತ್ತು. ಬಾರ್ ಕ್ಯಾಷಿಯರ್ ಲಕ್ಷಣ್ಣಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಹತ್ಯೆಗೊಳಗಾದ ವಿಜಯ್ ಸ್ನೇಹಿತರಾಗಿದ್ದ ಗಿರೀಶ್ ಹಾಗೂ ಲೋಕೇಶ್ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ವಿಜಯ್ ಚಾಮುಂಡೇಶ್ವರಿ ಬಾರ್ ನಲ್ಲಿ 2022 ರಲ್ಲಿ ಸಪ್ಲೈಯರ್ ಆಗಿ ಕೆಲಸ ಸೇರಿಕೊಂಡಿದ್ದ. ಆರು ತಿಂಗಳ ಕಾಲ ಕೆಲಸ ಮಾಡಿ ಅನ್ಯ ಕಾರಣಕ್ಕಾಗಿ ಕೆಲಸ ತೊರೆದು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಈ ಮಧ್ಯೆ ಆಗಾಗ ಬಾರ್ ಗೆ ಮದ್ಯಸೇವನೆಗೆ ಮಾಡಲು ವಿಜಯ್ ಬರುತ್ತಿದ್ದ. ನಿನ್ನೆ ಸಂಜೆ 7 ಗಂಟೆಗೆ ಬಾರ್ ಗೆ ಬಂದಿದ್ದ ಈತ ರಾತ್ರಿ 10 ಗಂಟೆವರೆಗೂ ಬಾರ್ ನಲ್ಲಿದ್ದ. ಈ ವೇಳೆ ಅಲ್ಲಿಗೆ ಬಂದ ಗಿರೀಶ್ ಹಾಗೂ ಲೊಕೇಶ್ ನೊಂದಿಗೆ ಮದ್ಯಪಾರ್ಟಿ ಮಾಡಿದ್ದನು. ಬಿಲ್ ನೀಡುವ ವಿಚಾರದಲ್ಲಿ ಗಲಾಟೆಯಾಗಿದೆ. ಮಾತಿನ ಭರದಲ್ಲಿ ಗಿರೀಶ್ ಗೆ ವಿಜಯ್ ಕುಂಟ ಎಂದು ರೇಗಿಸಿದ್ದಾನೆ. ಅನಂತರ ಬಾರ್ ಹೊರಗೆಯೂ ಮೂವರಲ್ಲಿ ಗಲಾಟೆ ಶುರುವಾಗಿದೆ.
ಬಾರ್ ಕೂಗಳತೆ ದೂರಕ್ಕೆ ವಿಜಯ್ನನ್ನು ಕರೆದುಕೊಂಡು ಹೋದ ಆರೋಪಿಗಳು ಅಲ್ಲೇ ಇದ್ದ ಹಾಲೋಬ್ಲಾಕ್ ಕಲ್ಲಿನಿಂದ ತಲೆ ಮೇಲೆ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದು ವಿಜಯ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ದುಷ್ಕೃತ್ಯ ನಡೆಸಿದ ಬಳಿಕ ಬಂಧನ ಭೀತಿಯಿಂದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಾರ್ ಕ್ಯಾಷಿಯರ್ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದರು. ಕೃತ್ಯವೆಸಗಿದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವುದಾಗಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ.