ಬೆಂಗಳೂರು :ಸಿನಿಮಾ ತಾರೆಯರ ಮಕ್ಕಳ ಹೆಸರಿನಲ್ಲಿ ವಂಚಿಸಿದ ಆರೋಪ ಹೊತ್ತಿರುವ ನಿಶಾ ನರಸಪ್ಪ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಆದರೆ, ಈಕೆಯ ವಿರುದ್ಧ ಪೊಲೀಸ್ ಠಾಣೆಗೆ ಬರುವ ದೂರುದಾರರ ಸಂಖ್ಯೆ ಹೆಚ್ಚುತ್ತಿದೆ. ಚೀಟಿಂಗ್ ಚಾತುರ್ಯದ ಮತ್ತಷ್ಟು ವಿಚಾರಗಳು ಬಯಲಾಗುತ್ತಿವೆ. ಮಾಸ್ಟರ್ ಆನಂದ್ ಅವರ ಮಗಳು ವಂಶಿಕಾ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೋಸ ಮಾಡಿರುವ ಗಂಭೀರ ಆರೋಪ ನಿಶಾ ನರಸಪ್ಪ ಮೇಲಿದ್ದು, ಸದ್ಯ ಜೈಲುವಾಸಿಯಾಗಿದ್ದಾರೆ.
ಸದಾಶಿವನಗರ, ಯಲಹಂಕ ಠಾಣೆಗೆ ಮತ್ತಷ್ಟು ಮಂದಿ ದೂರು ನೀಡಲು ಆಗಮಿಸುತ್ತಿದ್ದಾರೆ. ನಿಶಾ ವಂಚನೆಯ ಹೊಸ ಹೊಸ ವಿಚಾರಗಳೂ ಬಯಲಿಗೆ ಬರುತ್ತಿವೆ.
ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಹೆಸರಲ್ಲಿ ವಂಚನೆ ಆರೋಪ :ದೊಡ್ದ ದೊಡ್ಡ ಸ್ಟಾರ್‌ಗಳ ಹೆಸರು ಬಳಸಿಕೊಳ್ಳುತ್ತಿದ್ದ ನಿಶಾ, ದಿ. ಪುನೀತ್ ರಾಜ್‌ಕುಮಾರ್ ಹೆಸರನ್ನೂ ಬಿಟ್ಟಿಲ್ಲ. ಅಪ್ಪು ಅವರಿಗೆ ಟ್ರಿಬ್ಯೂಟ್ ಸಾಂಗ್ ಮಾಡ್ತಿದ್ದೀವಿ, ಅದರಲ್ಲಿ ನಿಮ್ಮ ಮಕ್ಕಳನ್ನೂ ಕುಣಿಸ್ತೀವಿ ಎಂದು ಹಲವರಿಂದ ಹಣ ಪಡೆದಿರುವ ಆರೋಪೂ ಇದೆ. ಶಿವರಾಜ್ ಕುಮಾರ್, ವಿಜಯ ರಾಘವೇಂದ್ರ ಸೇರಿ ಹಲವು ಸಿನಿಮಾ ನಟರ ಸಿನಿಮಾಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ್ದಾರೆ ಎಂಬ ಸಾಲು ಸಾಲು ಆರೋಪಗಳು ಕೇಳಿಬಂದಿವೆ.
ಇಲ್ಲಿಯವರೆಗೆ ಆನ್‌ಲೈನ್, ವ್ಯಾಟ್ಸ್‌ಆ್ಯಪ್ ಹಾಗು ನೇರ ದೂರುಗಳು ಸೇರಿ ಒಟ್ಟು 30ಕ್ಕೂ ಹೆಚ್ಚು ಜನರಿಂದ ದೂರುಗಳು ಬಂದಿದ್ದು, ಕೋಟ್ಯಂತರ ರೂಪಾಯಿ ವಂಚಿಸಿದ್ದಾಳೆ ಎಂದು ಹೇಳಲಾಗ್ತಿದೆ. ನಿಶಾ ಅವರನ್ನು 10 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲಿನ ಮಹಿಳಾ ಅಡ್ಮಿಷನ್ ಬ್ಯಾರಕ್ನಲ್ಲಿ ಈಕೆಯನ್ನು ಇರಿಸಲಾಗಿದೆ.