ಬೆಂಗಳೂರು: ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಯೂಟ್ಯೂಬ್ ಚಾನಲ್ ಮಾಲೀಕ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ ಮಾಲೀಕ ಆತ್ಮಾನಂದ, ಆನಂದ, ಶ್ರೀನಿವಾಸ್, ಕೇಶವಮೂರ್ತಿ ಎಂಬುವರು ಬಂಧಿತ ಆರೋಪಿಗಳು.
ಅಕ್ರಮ ಚಟುವಟಿಕೆಗಳ ಬಗ್ಗೆ ರಹಸ್ಯ ವಿಡಿಯೊ: ವಾಹಿನಿಯೊಂದರ ಮಾಲೀಕನಾಗಿರುವ ಆತ್ಮಾನಂದ ಹಲವು ವರ್ಷಗಳಿಂದ ಚಾನಲ್ ನಡೆಸುತ್ತಿದ್ದ. ಕಾನೂನುಬಾಹಿರ ಚಟುವಟಿಕೆ ಕಂಡುಬಂದರೆ ಸ್ಥಳಕ್ಕೆ ಹೋಗಿ ವಿಡಿಯೋ ಸೆರೆಹಿಡಿದು ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡುವುದಾಗಿ ಹೇಳಿ, ಪೊಲೀಸರಿಗೆ ಹೇಳಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಸುದ್ದಿ ಪ್ರಸಾರವಾದರೆ ತಮ್ಮ ಕಳ್ಳಾಟ ಬಯಲಾಗಲಿದೆ ಎಂದು ಅರಿತು ದಂಧೆಕೋರರು ಆರೋಪಿಗಳಿಗೆ ಹಣ ನೀಡುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿದ್ದ ಆರೋಪಿಗಳು ನಗರದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳ ಬಗ್ಗೆ ರಹಸ್ಯ ವಿಡಿಯೋ ಮಾಡಿ ಸುದ್ದಿ ಪ್ರಸಾರ ಮಾಡುವುದಾಗಿ ಬೆದರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷಾಂತರ ರೂಪಾಯಿ ಹಣ ವಸೂಲಿ: ಈ ಹಿಂದೆ ಕೆಮಿಕಲ್ಸ್ ದಂಧೆ, ಗ್ಯಾಸ್ ರಿಫಿಲ್ಲಿಂಗ್, ಅಕ್ರಮವಾಗಿ ದನದ ಮಾಂಸ ಮಾರಾಟ ಹೀಗೆ ನಾನಾ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದವರನ್ನು ಬೆದರಿಸಿ, ಅವರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿದ್ದರು. ಕೆ ಆರ್ ಪುರ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈ ಸಂಬಂಧ ಸಿಸಿಬಿ ತನಿಖೆ ಕೈಗೆತ್ತಿಕೊಂಡು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿ ಪಡೆಯಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.