ಬೆಂಗಳೂರು: ಎಟಿಎಂ ಯಂತ್ರದಿಂದ ಹಣ ದೋಚಿ ಪರಾರಿಯಾಗಿದ್ದ ಆರೋಪದಡಿ ಕಸ್ಟೋಡಿಯನ್ ಸಿಬ್ಬಂದಿ ಸಹಿತ ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಿಎಂಎಸ್ ಕಸ್ಟೋಡಿಯನ್ ಕಂಪನಿ ಸಿಬ್ಬಂದಿ ಅರುಳ್, ಆತನ ಸಹಚರರಾದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಬಂಧಿತ ಆರೋಪಿಗಳು.
ಪ್ರಕರಣದ ವಿವರ: ಜುಲೈ 5ರಂದು ಪರಪ್ಪನ ಅಗ್ರಹಾರ ವ್ಯಾಪ್ತಿಯಲ್ಲಿರುವ ಐಸಿಐಸಿಐ ಬ್ಯಾಂಕ್‌ನ ಎಟಿಎಂ ಯಂತ್ರದಿಂದ 24 ಲಕ್ಷ ರೂ.ದೋಚಲಾಗಿತ್ತು. ಜು.5ನೇ ತಾರೀಕು ಸಿಎಂಎಸ್ ಕಂಪನಿಯ ಕಸ್ಟೋಡಿಯನ್ ಸಿಬ್ಬಂದಿ ಐಸಿಐಸಿಐ ಬ್ಯಾಂಕ್ ಎಟಿಎಂ ಯಂತ್ರಕ್ಕೆ ಹಣ ತುಂಬಿಸಿದ್ದರು. ಕಸ್ಟೋಡಿಯನ್ ಸಿಬ್ಬಂದಿ ತೆರಳಿದ್ದ ಕೆಲವೇ ನಿಮಿಷದಲ್ಲಿ ಎಟಿಎಂನಲ್ಲಿದ್ದ 24 ಲಕ್ಷ ರೂ. ಕಳ್ಳತನವಾಗಿತ್ತು.
ಹೆಲ್ಮೆಟ್ ಧರಿಸಿ ಬಂದಿದ್ದ ಕಳ್ಳರು ಸಲೀಸಾಗಿ ಎಟಿಎಂನ ಸೇಫ್ಟಿ ಡೋರ್ ತೆರೆದು ಹಣ ಕಳ್ಳತನ ಮಾಡಿದ್ದರು. ಕಸ್ಟೋಡಿಯನ್ ಕಂಪನಿ ವತಿಯಿಂದ ಹಣ ತುಂಬಿಸಲು ಬಂದಿದ್ದ ಅರುಳ್, ಉದ್ದೇಶಪೂರ್ವಕವಾಗಿಯೇ ಸೇಫ್ಟಿ ಡೋರ್ ಸರಿಯಾಗಿ ಕ್ಲೋಸ್ ಮಾಡದೇ ತೆರಳಿದ್ದ. ಬಳಿಕ ಈ ಮಾಹಿತಿಯನ್ನು ತನ್ನ ತಂಡಕ್ಕೆ ತಿಳಿಸಿದ್ದಾನೆ. ನಂತರ ಸ್ಥಳಕ್ಕೆ ಬಂದಿದ್ದ ನದೀಂ, ಮಹೇಶ್ ಹಾಗೂ ಶ್ರೀರಾಮ್ ಎಟಿಎಂನಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದರು. ಕಳ್ಳತನದ ಕೃತ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಕಸ್ಟೋಡಿಯನ್ ಕಂಪನಿ ಸಿಬ್ಬಂದಿಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೊರ ರಾಜ್ಯಗಳಿಗೆ ತೆರಳಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬಾ ಮಾಹಿತಿ ನೀಡಿದ್ದಾರೆ.