ಬೆಂಗಳೂರು: ನ್ಯಾಯಾಲಯದ ಆದೇಶದ ಮೇರೆಗೆ ಮಾಜಿ ಡಾನ್ ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಸೇರಿ ನಾಲ್ವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಮ್ಮ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿರುವುದಾಗಿ ಆರೋಪಿಸಿ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀನಿವಾಸ್ ನಾಯ್ಡು ಎಂಬುವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ, ಸಹಚರರಾದ ತಾರಿಕ್ ರೆಹಾನ್, ಫರ್ಹಾನ್ ಹಾಗೂ ನಾರಾಯಣಸ್ವಾಮಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಯುತ್ತಿದ್ದಾರೆ.
ಕಳೆದ ಎರಡು ತಿಂಗಳ ಹಿಂದೆ ಹೋಟೆಲ್ವೊಂದರಲ್ಲಿ ಊಟ ಮಾಡುತ್ತಿದ್ದ ಶ್ರೀನಿವಾಸ್ ನಾಯ್ಡುಗೆ ರಿಕ್ಕಿ ರೈ ಹಾಗೂ ಸಹಚರರು ಅವಾಚ್ಯ ಶಬ್ಧದಿಂದ ನಿಂದಿಸಿ ಹಲ್ಲೆ ನಡೆಸಿದ್ದರು. ಪೊಲೀಸ್ ಠಾಣೆಗೆ ಹೋದರೆ ಕೊಲೆ ಮಾಡುವುದಾಗಿ ಬೆದರಿಸಿದ್ದರು. ಘಟನೆಯ ಬಳಿಕ ಮಾರನೇ ದಿನ ಅಂದರೆ ಮೇ 27ರಂದು ರಿಕ್ಕಿ ರೈ ಕಾರು ಚಾಲಕ ಸೋಮಶೇಖರ್, ಉದ್ಯಮಿ ಶ್ರೀನಿವಾಸ್ ನಾಯ್ಡು ಸೇರಿ ನಾಲ್ವರ ವಿರುದ್ಧ ದೂರು ದಾಖಲಾಗಿತ್ತು. ದೂರಿನಲ್ಲಿ ರಿಕ್ಕಿ ರೈ ಮೇಲೆ ಹಲ್ಲೆ ಮಾಡಿದ್ದಾಗಿ ಉಲ್ಲೇಖಿಸಲಾಗಿತ್ತು. ಕೋರ್ಟ್ ಮೊರೆ ಹೋಗಿದ್ದ ಶ್ರೀನಿವಾಸ್ ಇದೀಗ ಕೋರ್ಟ್ ನಿಂದ ಅನುಮತಿ ಪಡೆದು ರಿಕ್ಕಿ ರೈ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಇಬ್ಬರು ಕುಖ್ಯಾತ ರೌಡಿಶೀಟರ್ಗಳ ಎನ್ಕೌಂಟರ್: ಮತ್ತಿಬ್ಬರು ಪರಾರಿ
ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್ ಬಂಧನ:ಟೆಲಿಗ್ರಾಮ್ ಮೂಲಕ ಯುವಕರನ್ನು ಪರಿಚಯಿಸಿಕೊಂಡು ಸ್ನೇಹದಿಂದ ವರ್ತಿಸಿ ಯುವತಿ ಮಂದಿಟ್ಟು ಹನಿಟ್ರ್ಯಾಪ್ ದಾಳಕ್ಕೆ ಉರುಳಿಸುತ್ತಿದ್ದ ಮೂವರನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಯುವಕನನ್ನು ಜೆ.ಪಿ. ನಗರದ ವಿನಾಯಕ್ ನಗರಕ್ಕೆ ಕರೆಯಿಸಿಕೊಂಡು ಹನಿಟ್ರ್ಯಾಪ್ ಮಾಡಿ ಬೆದರಿಸಿ 50 ಸಾವಿರ ಸುಲಿಗೆ ಮಾಡಿರುವುದಾಗಿ ದೂರು ನೀಡಿದ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳಾದ ಶರಣಪ್ರಕಾಶ್ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವರನ್ನು ಬಂಧಿಸಲಾಗಿದೆ. ಯುವತಿ ಸೇರಿ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಟೆಲಿಗ್ರಾಂ ಮುಖಾಂತರ ಮಹಿಳಾ ಆರೋಪಿತೆ ಯುವಕರನ್ನು ಪರಿಚಯಿಸಿಕೊಂಡು ಅವರ ವೀಕ್ನೆಸ್ ಅರಿತು ತನ್ನ ಬಲೆಗೆ ಬೀಳಿಸಿಕೊಂಡು ಜೆ. ಪಿ. ನಗರದ ಐದನೇ ಹಂತದಲ್ಲಿರುವ ವಿನಾಯಕ್ ನಗರದ ಮನೆಯೊಂದಕ್ಕೆ ಕರೆಯಿಸಿಕೊಳ್ಳುತ್ತಿದ್ದಳು. ಈಕೆಯ ಹಿಂದೆ ಆರೋಪಿಗಳ ಗ್ಯಾಂಗ್ ಕೆಲಸ ಮಾಡುತ್ತಿತ್ತು. ಕಳೆದ ಎರಡು ತಿಂಗಳ ಹಿಂದೆ ದೂರುದಾರರನ್ನು ಮನೆಗೆ ಕರೆಯಿಸಿಕೊಂಡಿದ್ದರು. ಮನೆ ಡೋರ್ಬೆಲ್ ಮಾಡುತ್ತಿದ್ದಂತೆ ಅರೆಬರೆ ಬಟ್ಟೆಯಲ್ಲಿ ಯುವತಿ ಸ್ವಾಗತಿಸುತ್ತಿದ್ದಳು. ಕೆಲ ಕ್ಷಣಗಳ ಬಳಿಕ ಪೂರ್ವಸಂಚಿನಂತೆ ಮನೆಗೆ ನುಗ್ಗಿ ಆತನ ಮೊಬೈಲ್ ಕಸಿದು ನಾಲ್ವರ ಗ್ಯಾಂಗ್ ಪ್ರಶ್ನಿಸುತಿತ್ತು. ಅನ್ಯ ಧರ್ಮದ ಯುವತಿಯಾಗಿದ್ದು, ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳುವುದು ತಪ್ಪು ಎಂದು ಹೇಳುತ್ತಲೇ ಕ್ಷಣಾರ್ಧದಲ್ಲಿ ಮೊಬೈಲ್ನಲ್ಲಿ ಫೋಟೋ - ವಿಡಿಯೋ ಸೆರೆಹಿಡಿಯುತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.