ಬೆಂಗಳೂರು: 50 ಲಕ್ಷ ಹಣ ಕಳಿಸದಿದ್ದರೆ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಕೊಲೆ ಮಾಡಿಸುವುದಾಗಿ ಹೈಕೋರ್ಟ್ನ ಸಾರ್ವಜನಿಕ ಸಂಪರ್ಕ ಅಧಿಕಾರಿಗೆ ವಾಟ್ಸಾಪ್ ಮೂಲಕ ಬೆದರಿಕೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೈಕೋರ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಸಂಪರ್ಕಾಧಿಕಾರಿ ಮುರುಳಿ ಎಂಬುವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಬೆದರಿಕೆ ಹಾಕಿದ ಆರೋಪದಡಿ ನೀಡಿದ ದೂರನ್ನು ಆಧರಿಸಿ ಐಟಿ ಕಾಯ್ದೆ ಹಾಗೂ ಅಪರಾಧ ಸಂಚು ಸೇರಿದಂತೆ ವಿವಿಧ ಐಪಿಸಿ ಸೆಕ್ಷನ್ಗಳಡಿ ಪೊಲೀಸರು ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇದೇ ತಿಂಗಳು 12 ರಂದು ಸಂಜೆ 7 ಗಂಟೆ ಸುಮಾರಿಗೆ ಅನಾಮಧೇಯ ವ್ಯಕ್ತಿಯೊಬ್ಬ, ಮುರುಳಿ ಅವರ ವಾಟ್ಸಾಪ್ಗೆ ಸಂದೇಶ ಕಳುಹಿಸಿದ್ದು, ಇದರಲ್ಲಿ ಎಬಿಎಲ್ ಆಲೈಡ್ ಲಿಮಿಟೆಡ್ ಪಾಕಿಸ್ತಾನ ಬ್ಯಾಂಕ್ ಅಕೌಂಟ್ ನಂಬರ್ ಕಳುಹಿಸಿ 50 ಲಕ್ಷ ಹಣ ಕಳುಹಿಸಬೇಕು. ಒಂದು ವೇಳೆ ಹಣ ಹಾಕದಿದ್ದರೆ ಹೈಕೋರ್ಟ್ ಜಡ್ಜ್ಗಳಾದ ಮೊಹಮ್ಮದ್ ನವಾಜ್, ಎಚ್. ಟಿ. ನರೇಂದ್ರ ಪ್ರಸಾದ್, ಅಶೋಕ ಜಿ. ನಿಜಗಣ್ಣನವರ್, ಎಚ್. ಪಿ. ಸಂದೇಶ್, ಕೆ. ನಟರಾಜನ್ ಹಾಗೂ ವೀರಪ್ಪ ಅವರನ್ನು ದುಬೈ ಗ್ಯಾಂಗ್ ನಿಂದ ಹತ್ಯೆ ಮಾಡಿಸುವುದಾಗಿ ಬೆದರಿಕೆ ಸಂದೇಶ ಕಳುಹಿಸಿದ್ದ. ಅಲ್ಲದೇ ಹೈ ಇಂಡಿಯನ್ ಹಮಾರಾ ಆಪ್ ಕೇ ಶೂಟರ್ ಹೈ ಎಂದು ಹಿಂದಿ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿ ಬೆದರಿಕೆ ಸಂದೇಶ ಕಳುಹಿಸಿದ್ದಾನೆ. ಸದ್ಯ ಸೆಂಟ್ರಲ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಸುಮೋಟೋ ಪ್ರಕರಣ ದಾಖಲಿಸಲು ವಕೀಲರ ಸಂಘ ಆಗ್ರಹ:ನ್ಯಾಯಮೂರ್ತಿಗಳ ಕೊಲೆ ಬೆದರಿಕೆಯು ಸಾರ್ವಜನಿಕರು ಮತ್ತು ವಕೀಲರ ವಲಯದಲ್ಲಿ ಆಘಾತಕ್ಕೆ ಕಾರಣವಾಗಿದ್ದು, ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೊಳಪಡಿಸಬೇಕು ಎಂದು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಬೆಂಗಳೂರು ವಕೀಲರ ಸಂಘ ಬರೆದಿದೆ.