ಬೆಂಗಳೂರು: ಸಂಗಾತಿಯ ಮೇಲಿನ ಸಿಟ್ಟಿಗೆ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಸಿನಿಮೀಯ ಮಾದರಿಯಲ್ಲಿ ಮಗುವನ್ನು ಅಪಹರಿಸಿದ ತಂದೆಯನ್ನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಮೂಲದ ಉದ್ಯಮಿ ಹರಿಕೃಷ್ಣ ಬಂಧಿತ ಆರೋಪಿ. ಜೂನ್ 16ರಂದು ಕೊಡಿಗೆಹಳ್ಳಿ ಠಾಣಾ ವ್ಯಾಪ್ತಿಯ ಜಿಕೆವಿಕೆ ಬಳಿ ಬಂದಿದ್ದ ಆರೋಪಿ ತಮ್ಮ ಸಂಗಾತಿಯ ಕೈಯಲ್ಲಿದ್ದ ಆರು ವರ್ಷದ ಮಗನನ್ನ ಅಪಹರಿಸಿಕೊಂಡು ಹೋಗಿದ್ದರು.
ದೂರುದಾರಳೊಂದಿಗೆ ಲಿವಿಂಗ್ ಟುಗೆದರ್ ನಲ್ಲಿದ್ದ ಆರೋಪಿ ಸಂಗಾತಿಯೊಂದಿಗೆ ಜಗಳ ಮಾಡಿಕೊಂಡಿದ್ದರು. ಇಬ್ಬರಿಗೂ ಆರು ವರ್ಷದ ಗಂಡು ಮಗುವಿದ್ದು, ಮಗು ವಿಚಾರವಾಗಿ ಇಬ್ಬರೂ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಾಯಿ ಮಗುವನ್ನು ಕರೆದೊಯ್ಯಬಹುದು ಎಂದಿದ್ದ ನ್ಯಾಯಾಲಯ ಮಗುವನ್ನು ತಾಯಿಯ ಸುಪರ್ದಿಗೆ ನೀಡಿತ್ತು. ಆದರೆ ತಾಯಿ ತನ್ನ ಮಗನನ್ನ ಶಾಲೆಗೆ ಬಿಡಲು ತೆರಳಿದ್ದಾಗ ಆಟೋದಲ್ಲಿ ಹಿಂಬಾಲಿಸಿ ಆಕೆಯ ಕೈಯಿಂದ ಮಗುವನ್ನ ಕಿತ್ತುಕೊಂಡು ತಾನು ಬಂದಿದ್ದ ಆಟೋದಲ್ಲಿ ಆರೋಪಿ ಪರಾರಿಯಾಗಿದ್ದಾರೆ ದೂರು ದಾಖಲಾಗಿದೆ.
ಮಗುವಿನ ತಾಯಿ ನೀಡಿದ ದೂರು ಪಡೆದು ಪ್ರಕರಣ ದಾಖಲಿಸಿಕೊಂಡಿರುವ ಕೊಡಿಗೆಹಳ್ಳಿ ಪೊಲೀಸರು ಸತತ 7 ದಿನಗಳ ಕಾಲ ಹುಡುಕಾಟ ನಡೆಸಿದ್ದರು. ಮಗನೊಂದಿಗೆ ಬಳ್ಳಾರಿ, ಕಲಬುರಗಿ ನಂತರ ಗೋವಾ ಅಂತಾ ಹರಿಕೃಷ್ಣ ಸುತ್ತಾಡಿದ್ದರು. ಹಲವು ಆಯಾಮದಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೆ ಗೋವಾದಲ್ಲಿ ಹರಿಕೃಷ್ಣನನ್ನ ಪತ್ತೆಹಚ್ಚಿದ್ದಾರೆ. ಬಳಿಕ ತಂದೆ - ಮಗ ಇಬ್ಬರನ್ನೂ ಬೆಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ವೇಳೆ ಆರೋಪಿ ಹರಿಕೃಷ್ಣ 2020ರಲ್ಲಿ ತಲಘಟ್ಟಪುರದಲ್ಲಿ ತಮ್ಮ ತಂದೆಯನ್ನ ಹತ್ಯೆಗೈದ ಪ್ರಕರಣದಲ್ಲಿ ಆರೋಪಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.