ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಖದೀಮರು ಕಿಟಕಿ ಮುರಿದು ಮನೆ ಪ್ರವೇಶಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಪ್ರಕರಣ ಇಲ್ಲಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಾಗಲಗುಂಟೆ ಸೋಪ್ ಫ್ಯಾಕ್ಟರಿ ಲೇಔಟ್ ನಿವಾಸಿ ಎಂಜಿನಿಯರ್ ವಿನಾಯಕ್ ಶಿಂಧೆ ಎಂಬುವರ ಮನೆಯಲ್ಲಿ ಕಳ್ಳತನವಾಗಿದೆ. ಖದೀಮರು ಸುಮಾರು 300 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ತೂಕದ ಬೆಳ್ಳಿ ಸಾಮಗ್ರಿ ಸೇರಿ ಸುಮಾರು 15.30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿನಾಯಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಕಳ್ಳರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೀಣ್ಯದ ಖಾಸಗಿ ಕಂಪನಿಯಲ್ಲಿ ವಿನಾಯಕ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬ ಸಮೇತ ಸೋಪ್ ಫ್ಯಾಕ್ಟರಿ ಲೇಔಟ್ ನಲ್ಲಿ ನೆಲೆಸಿದ್ದಾರೆ. ಕೆಲಸದ ಸಲುವಾಗಿ ವಿನಾಯಕ್ ಪತ್ನಿ 15 ದಿನಗಳ ಹಿಂದೆ ಸ್ವಂತ ಊರು ಹಾವೇರಿಗೆ ತೆರಳಿದ್ದರು. ಜುಲೈ 29ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ವಿನಾಯಕ್ ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಕೆಲಸಕ್ಕೆ ತೆರಳಿದ್ದರು.
ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸ್ ಬಂದಾಗ, ಮನೆಯ ಕಿಟಕಿ ತೆರೆದಿರುವುದು ಗೊತ್ತಾಗಿದೆ. ಹತ್ತಿರ ಹೋಗಿ ನೋಡಿದಾಗ ದುಷ್ಕರ್ಮಿಗಳು ಆಯುಧದಿಂದ ಕಿಟಕಿ ಲಾಕ್ ಮೀಟಿರುವುದು ಕಂಡು ಬಂದಿದೆ. ಬಳಿಕ ಮನೆ ಪ್ರವೇಶಿಸಿ ನೋಡಿದಾಗ ರೂಮ್ ನಲ್ಲಿ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಬೀರುವಿನಲ್ಲಿ ಇರಿಸಿದ್ದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.
ಖದೀಮರು ಕಿಟಕಿ ಲಾಕ್ ಮುರಿದು ಬಳಿಕ ಮನೆಯ ಬಾಗಿಲು ತೆರೆದು ಮನೆ ಪ್ರವೇಶಿಸಿ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ವಿನಾಯಕ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಆರೋಪಿಗಳ ಪತ್ತೆಗೆ ಜಾಲ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.