ಬೆಂಗಳೂರು: ನೈಟ್ ಸೆಕ್ಯುರಿಟಿ ಗಾರ್ಡ್ ಮೇಲೆ ಪುಡಿರೌಡಿಯೊಬ್ಬ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಸೋಮವಾರ ಬೆಳಗಿನ ಜಾವ 2.30ರ ಸುಮಾರಿಗೆ ಆರ್.ಟಿ. ನಗರದ ಎಂಎಲ್ಎ ಲೇಔಟಿನಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸದಿಂದ ಕೂಗಳತೆ ದೂರದಲ್ಲಿಯೇ ಘಟನೆ ನಡೆದಿದ್ದು, ಅಪರಿಚಿತ ಆರೋಪಿಯ ಕೃತ್ಯಕ್ಕೆ ಸೆಕ್ಯುರಿಟಿ ಗಾರ್ಡ್ ಅಲ್ಬರ್ಟ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಂಎಲ್ಎ ಲೇಔಟ್ 1ನೇ ಮುಖ್ಯರಸ್ತೆಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ಆಲ್ಬರ್ಟ್ ಭಾನುವಾರ ರಾತ್ರಿ ಕರ್ತವ್ಯದಲ್ಲಿದ್ದರು. ಈ ವೇಳೆ ಬೆಳಗಿನ ಜಾವ 2:30 ರ ಸುಮಾರಿಗೆ ಬಂದಿದ್ದ ಆರೋಪಿಯು ಆಲ್ಬರ್ಟ್ ಕುಳಿತಿದ್ದ ಕುರ್ಚಿಯ ಹಿಂದೆ ಬಂದು ನಿಂತುಕೊಂಡಿದ್ದ. ಆರೋಪಿಯನ್ನು ಉದ್ದೇಶಿಸಿ 'ಯಾರಪ್ಪ ನೀನು? ರಾತ್ರಿ ವೇಳೆ ಇಲ್ಲೆಲ್ಲಾ ಓಡಾಡಬಾರದು, ಕ್ಯಾಮೆರಾಗಳಿವೆ' ಎಂದು ಆಲ್ಬರ್ಟ್ ಹೇಳಿದ್ದರು. ಅಷ್ಟಕ್ಕೆ ಸಿಟ್ಟಿಗೆದ್ದ ಆರೋಪಿ ಅವಾಚ್ಯವಾಗಿ ನಿಂದಿಸಿ, ತನ್ನ ಬಳಿಯಿದ್ದ ಚಾಕುವಿನಿಂದ ಆಲ್ಬರ್ಟ್ರ ಎಡಗೆನ್ನೆ ಕೊಯ್ದು ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಸಾರ್ವಜನಿಕರೊಬ್ಬರ ಸಹಾಯದಿಂದ ಸ್ಥಳಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವ ಆಲ್ಬರ್ಟ್ ಆರ್.ಟಿ. ನಗರ ಪೊಲೀಸ್ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ. ಸೆಕ್ಯುರಿಟಿ ಗಾರ್ಡ್ ಮೇಲೆ ಆರೋಪಿ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ ಹಾವಳಿ ಅತಿಯಾಗುತ್ತಿದೆ. ರಾತ್ರಿ ಕೆಲಸ ಮುಗಿಸಿ ವಾಪಸಾಗುತ್ತಿದ್ದವರನ್ನು ಅಡ್ಡಗಟ್ಟಿ ನಮ್ಮ ಏರಿಯಾದಲ್ಲಿ ಯಾಕೆ ಓಡಾಡುತ್ತಿದ್ದೀರಾ ಎಂದು ಓರ್ವನನ್ನ ಹತ್ಯೆಗೈದು ಮತ್ತೋರ್ವನ ಮೇಲೆ ಹಲ್ಲೆ ಮಾಡಿರುವ ಘಟನೆ ಜೂನ್ 14ರ ರಾತ್ರಿ ರಾಮಮೂರ್ತಿ ನಗರದ ವಿಜಿನಾಪುರದಲ್ಲಿ ನಡೆದಿತ್ತು.