ಬೆಂಗಳೂರು: ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಶವ ಪೀಣ್ಯಾ ಠಾಣಾ ವ್ಯಾಪ್ತಿಯ ಚನ್ನನಾಯಕನಪಾಳ್ಯದಲ್ಲಿ ದೊರೆತಿದೆ. ವ್ಯಕ್ತಿಗೆ ಸುಮಾರು 40 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಪೀಣ್ಯಾ ಠಾಣಾ ಪೊಲೀಸರು, ಸೋಕೋ (ಸೀನ್ ಆಫ್ ಕ್ರೈಂ ಆಫೀಸರ್ಸ್) ತಂಡ ಹಾಗೂ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದ ಬಯಲಿನಲ್ಲಿ ಶವ ಕಂಡುಬಂದಿದ್ದು, ಬೇರೆಡೆ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯಕ್ಕೂ ಮುನ್ನ ಸ್ಥಳದಲ್ಲಿ ಮದ್ಯಪಾನ ಸೇವಿಸಿರುವುದು ತಿಳಿದುಬಂದಿದೆ. ಕಸದ ರಾಶಿಯ ಮೇಲೆ ಶವ ಇರಿಸಿ ಬೆಂಕಿ ಹಚ್ಚಲಾಗಿದೆ. ಘಟನಾಸ್ಥಳದ ಸಮೀಪದಲ್ಲಿಯೇ ಒಂದು ಬಾರ್ & ರೆಸ್ಟೋರೆಂಟ್ ಇದ್ದು, ಅನೇಕ ಜನರು ಅದರ ಮುಂಭಾಗದ ಖಾಲಿ ಜಾಗದಲ್ಲಿ ಪಾರ್ಟಿ ಮಾಡುತ್ತಾರೆ ಎಂದು ಸಾಕಷ್ಟು ಬಾರಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.
ನಿನ್ನೆ ತಡರಾತ್ರಿ ಅದೇ ಸ್ಥಳದಲ್ಲಿ ಕೃತ್ಯ ಎಸಗಲಾಗಿದೆ. ಪಾರ್ಟಿ ಮಾಡುತ್ತಿದ್ದಾಗ ಸ್ಥಳದಲ್ಲಿ ಹತ್ಯೆಗೈದು ಸಮೀಪದಿಂದ ಪೆಟ್ರೋಲ್ ಅಥವಾ ಯಾವುದೋ ಇಂಧನ ತಂದು ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಅದೇ ಸ್ಥಳದಲ್ಲಿ ಹತ್ಯೆಗೈದಿರುವ ಸಾಧ್ಯತೆ ಕಂಡುಬಂದಿದ್ದು, ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಡರಾತ್ರಿ ಸ್ಥಳದಲ್ಲಿ ಯಾರು ಬಂದು ಹೋಗಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ತಿಳಿಸಿದ್ದಾರೆ.