ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮನೆ ಕೂಗಳತೆ ದೂರದಲ್ಲಿ ಅಪಾರ್ಟ್ ಮೆಂಟ್ ವೊಂದರ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದ ಆರೋಪಿಯನ್ನು ಆರ್ ಟಿ ನಗರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಆರೋಪಿ ಒಪ್ಪಿಕೊಂಡಿದ್ದಾನೆ.
ಡಿಜಿ ಹಳ್ಳಿ ನಿವಾಸಿ ತೌಸಿಫ್ ಬಂಧಿತ ಆರೋಪಿ. ಜೂನ್ 18ರ ರಾತ್ರಿ ಆರ್.ಟಿ. ನಗರದ ಅಪಾರ್ಟ್ ಮೆಂಟ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಆಲ್ಬರ್ಟ್ ಎಂಬುವರ ಮುಖಕ್ಕೆ ಚಾಕುವಿನಿಂದ ಇರಿದು ಹಲ್ಲೆ ಮಾಡಿರುವ ಆರೋಪದಡಿ ಬಂಧಿಸಲಾಗಿದೆ.
ಆರೋಪಿ ಡಿಜಿ ಹಳ್ಳಿಯಲ್ಲಿ ತಂದೆಯೊಂದಿಗೆ ವಾಸವಿದ್ದನು. ಕೆಲಸವಿಲ್ಲದೆ ಸುಖಾಸುಮ್ಮನೆ ತಿರುಗಾಡುತ್ತಿದ್ದ. ಬೀದಿಯಲ್ಲಿ ಪ್ಲಾಸ್ಟಿಕ್-ಕಬ್ಬಿಣ ವಸ್ತುಗಳನ್ನು ಆಯ್ದು ಮಾರಾಟ ಮಾಡುತ್ತಿದ್ದನು. ಅದರಿಂದ ಬರುತ್ತಿದ್ದ ಹಣವನ್ನ ಕುಡಿತಕ್ಕೆ ವಿನಿಯೋಗಿಸುತ್ತಿದ್ದ. ರಾತ್ರಿ ಆಯ್ತು ಅಂದರೆ ಎಲ್ಲೆಂದರಲ್ಲಿ ಮಲಗುತ್ತಿದ್ದನು. ಕೆಲವು ದಿನಗಳ ಹಿಂದೆ ಆರ್.ಟಿ.ನಗರದ ಬಳಿ ಬಂದು ಕುಡಿದ ಸೋಗಿನಲ್ಲಿ ಸೆಕ್ಯೂರಿಟಿ ಗಾರ್ಡ್ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದನು. ಈತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆ ವೇಳೆ ರಾಮಮೂರ್ತಿನಗರ, ಸಂಜಯ್ ನಗರ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಸೆಕ್ಯೂರಿಟಿ ಗಾರ್ಡ್ ಗಳ ಮೇಲೆ ಚಾಕುವಿನಿಂದ ಇರಿದು ಹಲ್ಲೆಗೈದಿರುವ ಕುರಿತಾಗಿ ಬಾಯ್ಬಿಟ್ಟಿದ್ದಾನೆ. ಮೊಬೈಲ್ ಸುಲಿಗೆ ಪ್ರಕರಣದಲ್ಲಿ ಸದಾಶಿವನಗರ ಪೊಲೀಸರು ಈತನನ್ನ ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದು ಅಡ್ಡಾದಿಡ್ಡಿಯಾಗಿ ಒಂಟಿಯಾಗಿ ಓಡಾಡಿ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾನೆ.