ಬೆಂಗಳೂರು :ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ವಾರ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವೃತ್ತಿ ವೈಷಮ್ಯ ಹತ್ಯೆ ಮಾಡಿದ್ದ ಮೂವರನ್ನು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಆನಂದ್ ಎಂಬಾತನನ್ನು ಕೊಲೆ ಮಾಡಿದ ಆರೋಪಡಿ ಸತೀಶ್, ಪುಟ್ಟ ಹಾಗೂ ದಯಾನಂದ್ ಎಂಬುವರನ್ನು ಬಂಧಿಸಲಾಗಿದೆ.
ಈ ಆರೋಪಿಗಳು ಕಳೆದ ಜುಲೈ 2 ರಂದು ಆನಂದ್ನನ್ನು ಹತ್ಯೆ ಮಾಡಿದ್ದರು. ಚನ್ನನಾಯಕನಪಾಳ್ಯದ ನಿರ್ಜನ ಪ್ರದೇಶದ ಬಯಲಿನಲ್ಲಿ ಶವ ಕಂಡುಬಂದಿದ್ದು, ಬೇರೆಡೆ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಕೃತ್ಯಕ್ಕೂ ಮುನ್ನ ಸ್ಥಳದಲ್ಲಿ ಮದ್ಯಪಾನ ಸೇವಿಸಿರುವುದು, ಕಸದ ರಾಶಿಯ ಮೇಲೆ ಶವ ಇರಿಸಿ ಬೆಂಕಿ ಹಚ್ಚಲಾಗಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿತ್ತು. ಪ್ರಕರಣವನ್ನು ಚುರುಕುಗೊಳಿಸಿದ ಪೊಲೀಸರು 1 ವಾರದಲ್ಲೇ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಹತ್ಯೆಗೆ ಕಾರಣ ನೋಡುವುದಾದರೆ, ಹೆಗ್ಗನಹಳ್ಳಿಯಲ್ಲಿ ವಾಸವಾಗಿದ್ದ ಆನಂದ್, ಆರೋಪಿ ಸತೀಶ್ ಬಳಿ ಕಳೆದ ಎಂಟು ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ. ಕಳೆದ ಐದಾರು ತಿಂಗಳಿಂದ ಆನಂದ್ ಸ್ವಂತವಾಗಿ ಅಡುಗೆ ಕೇಟರಿಂಗ್ ವ್ಯವಹಾರ ಆರಂಭಿಸಿದ್ದ. ಇದರಿಂದ ಅರೋಪಿ ಸತೀಶ್ ನಡೆಸುತ್ತಿದ್ದ ಕೇಟರಿಂಗ್ ವ್ಯವಹಾರ ನಷ್ಟವಾಗಿತ್ತು. ಆನಂದ್ ಬೆಳವಣಿಗೆ ಸಹಿಸದೆ ಕತ್ತಿ ಮಸೆಯುತ್ತಿದ್ದ ಸತೀಶ್ ಕಳೆದ ಮೂರು ತಿಂಗಳಿಂದ ಕೊಲೆಗೆ ಸಂಚು ರೂಪಿಸಿದ್ದ.
ಇದನ್ನೂ ಓದಿ:Chikkamagaluru crime: ಎರಡನೇ ಹೆಂಡತಿ ಕಡೆ ಗಂಡನಿಗೆ ಹೆಚ್ಚಿನ ಒಲವು: ಸವತಿಯನ್ನು ಕೊಂದು ಪೊಲೀಸರಿಗೆ ಶರಣಾದ ಮೊದಲ ಪತ್ನಿ
ಇದಕ್ಕಾಗಿ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಕೆಲಸಗಾರರನ್ನು ಜೊತೆಗೆ ಸೇರಿಸಿಕೊಂಡಿದ್ದ. ಕಳೆದ ಶನಿವಾರ ಪಾರ್ಟಿ ಮಾಡೋಣ ಬಾ ಎಂದು ಚನ್ನರಾಯನಪಾಳ್ಯ ಬಳಿ ಆನಂದ್ ಕರೆಯಿಸಿಕೊಂಡಿದ್ದಾರೆ. ಒಟ್ಟಿಗೆ ಪಾರ್ಟಿ ಮಾಡಿದ ಬಳಿಕ ಪೂರ್ವಾ ಸಂಚಿನಂತೆ ಆನಂದ್ನನ್ನು ಕೊಲೆ ಮಾಡಿದ್ದಾರೆ. ಬಳಿಕ ಗುರುತು ಸಿಗದಿರಲು ಶವದ ಮೇಲೆ ಪೆಟ್ರೋಲ್ ಹಾಕಿ ಸುಟ್ಟು ಹಾಕಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ವಾರ್ಷಿಕೋತ್ಸವ ದಿನದಂದೇ ಮೃತನಾದ ಗಂಡ:ಜುಲೈ 2 ರಂದು ಮದುವೆ ವಾರ್ಷಿಕೋತ್ಸವ ಹಿನ್ನೆಲೆ ತಮಿಳುನಾಡಿನಲ್ಲಿ ನೆಲೆಸಿದ್ದ ಹೆಂಡತಿಯನ್ನು ಬೆಂಗಳೂರಿಗೆ ಬರುವಂತೆ ಮೃತ ಆನಂದ್ ಆಹ್ವಾನ ನೀಡಿದ್ದ. ಇದೇ ವೇಳೆ ಮ್ಯಾರೇಜ್ ಆನಿವರ್ಸರಿ ಎಂದು ಅರಿತ ಆರೋಪಿಗಳು ಇದನ್ನು ದುಬರ್ಳಕೆ ಮಾಡಿಕೊಂಡು ಆನಂದ್ನನ್ನು ಶನಿವಾರ ರಾತ್ರಿ ಪಾರ್ಟಿ ಮಾಡಲು ಆರೋಪಿಗಳು ಕರೆದು ಹತ್ಯೆ ಮಾಡಿದ್ದಾರೆ.
ಮಾರನೇ ದಿನ ಗಂಡನೊಂದಿಗೆ ವಾರ್ಷಿಕೋತ್ಸವ ಆಚರಿಸಲು ಬೆಂಗಳೂರಿಗೆ ಬಂದ ಪತ್ನಿಗೆ ಗಂಡ ಶವದ ರೂಪದಲ್ಲಿ ಪತ್ತೆಯಾಗಿದ್ದರು. ಹತ್ಯೆ ಪ್ರಕರಣ ಆರೋಪದಡಿ ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:Bengaluru crime: ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ.. ಡಿಸಿಪಿ ಶಿವಪ್ರಕಾಶ್ ದೇವರಾಜು ಹೇಳಿದ್ದೇನು?