ಬೆಂಗಳೂರು: ಉತ್ತರ ಪ್ರದೇಶದಿಂದ ಬಂದು ಬೆಂಗಳೂರಿನಲ್ಲಿ ಮನೆಗಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಸಂಜಯ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜಸ್ವೀರ್, ಹರಿಶ್ಚಂದ್ರ, ಚಂದ್ರಭಾನು, ಮಿಂಟು ವಿಶ್ವಾಸ್ ಬಂಧಿತ ಆರೋಪಿಗಳಾಗಿದ್ದು, 78.65 ಲಕ್ಷ ಮೌಲ್ಯದ 1 ಕೆಜಿ 430 ಗ್ರಾಂ ತೂಕದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳ್ಳತನ ಮಾಡಲೆಂದೇ ಉತ್ತರ ಪ್ರದೇಶದಿಂದ ಬೇರೆ ಬೇರೆ ರಾಜ್ಯಗಳ ನಗರಗಳಿಗೆ ತೆರಳುತ್ತಿದ್ದ ಆರೋಪಿಗಳು, ಹಗಲಿನಲ್ಲಿ ಓಡಾಡಿ ಡೋರ್ ಲಾಕ್ ಮಾಡಲಾಗಿರುವ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ರಾತ್ರಿ ಸಂದರ್ಭದಲ್ಲಿ ಅದೇ ಮನೆಗಳ ಬಳಿ ತೆರಳಿ ಡೋರ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದರು. ಬಳಿಕ ಬೇರೆ ಬೇರೆಯಾಗಿ ವಾಪಸ್ ಉತ್ತರ ಪ್ರದೇಶಕ್ಕೆ ಮರಳುತ್ತಿದ್ದರು. ಇದೇ ರೀತಿ ಜುಲೈ 24ರಂದು ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಆ್ಯಕ್ಟಿವಾ ಸ್ಕೂಟರ್ ಒಂದನ್ನು ಖರೀದಿಸಿ ಸುತ್ತಾಡಿ ಡಾಲರ್ಸ್ ಕಾಲೊನಿಯ ಮನೆಯೊಂದನ್ನು ಗುರುತಿಸಿಕೊಂಡಿದ್ದರು.
ಜುಲೈ 28 ರಂದು ರಾತ್ರಿ ಆ ಮನೆಯ ಡೋರ್ ಲಾಕ್ ಮುರಿದು ಚಿನ್ನ, ವಜ್ರದ ಆಭರಣಗಳನ್ನು ಕದ್ದು ಪರಾರಿಯಾಗಿದ್ದರು. ಮನೆಗಳ್ಳತನ ಪ್ರಕರಣ ದಾಖಲಿಸಿಕೊಂಡ ಸಂಜಯ ನಗರ ಠಾಣಾ ಪೊಲೀಸರು ತ್ವರಿತ ಕಾರ್ಯಾಚರಣೆ ಕೈಗೊಂಡು ಕನ್ಯಾಕುಮಾರಿ- ದೆಹಲಿ ಹೈವೇಯಲ್ಲಿರುವ ಶಾಹೀನ್ ಟೋಲ್ ಬಳಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಬಂಧಿತರು ನೀಡಿದ ಮಾಹಿತಿ ಮೇರೆಗೆ ಪಶ್ಚಿಮ ದೆಹಲಿಯ ತಿಲಕ್ ನಗರ ಬಳಿ ಮತ್ತೋರ್ವ ಆರೋಪಿಯನ್ನು ಬಂಧಿಸಿದ್ದಾರೆ.