ಬೆಂಗಳೂರು : ಐಫೋನ್ ಹಾಗೂ ದುಬಾರಿ ಬೆಲೆಯ ಫೋನ್ಗಳನ್ನೇ ಗುರಿಯಾಗಿಸಿಕೊಂಡು ಸುಲಿಗೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿವೇಕನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಬಂಧಿತ ಆರೋಪಿಗಳು ಗೋರಿಪಾಳ್ಯದ ನಿವಾಸಿಗಳಾಗಿದ್ದು, ಶಾಕೀಬ್, ಸುಹೈಲ್ ಹಾಗೂ ಮೊಹಮ್ಮದ್ ಸಕ್ಲೇನ್ ಎಂದು ಗುರುತಿಸಲಾಗಿದೆ.
ಐಷಾರಾಮಿ ಜೀವನಕ್ಕಾಗಿ ಕಳ್ಳತನದ ಅಡ್ಡದಾರಿ ಹಿಡಿದಿದ್ದ ಮೂವರು ಆರೋಪಿಗಳು ನಗರದಲ್ಲಿ ರಾತ್ರಿ ವೇಳೆ ಒಂಟಿಯಾಗಿ ಓಡಾಡುವ ಸಾರ್ವಜನಿಕರನ್ನು ಗುರಿಯಾಗಿಸಿಕೊಳ್ಳತ್ತಿದ್ದರು. ನಂತರ ಬೈಕಿನಲ್ಲಿ ತೆರಳಿ ಐಫೋನ್ಗಳನ್ನು ಕಸಿದುಕೊಂಡು ಪರಾರಿಯಾಗುತ್ತಿದ್ದರು. ಕದ್ದ ಬಳಿಕ ಹೈದರಾಬಾದ್ಗೆ ಐಫೋನ್ ಗಳನ್ನು ಬಿಡಿ ಭಾಗದ ವಸ್ತುಗಳಾಗಿ ವಿಂಗಡಿಸಿ ಕಳುಹಿಸುತ್ತಿದ್ದರು. ಒಂದು ಐಫೋನ್ ಕದ್ದರೆ ಸುಮಾರು 10 ಸಾವಿರ ರೂ.ಗಳು ಇಲ್ಲ, ಸ್ಮಾರ್ಟ್ ಫೋನ್ ಕದ್ದರೆ 4 ಸಾವಿರ ರೂ.ಗಳನ್ನು ಪಡೆಯುತ್ತಿದ್ದರು.
ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಸಮೇತ ಮಾರಾಟ ಮಾಡಲು ಮುಂದಾಗಿದ್ದ ಆರೋಪಿ ಬಂಧನ ಕಳೆದ ಐದಾರು ತಿಂಗಳಿಂದ ಮೊಬೈಲ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ ಈವರೆಗೆ ಚಾಲಾಕಿಗಳು ಪೊಲೀಸರ ಕೈಗೆ ಸಿಕ್ಕಿಬಿದ್ದಿರಲಿಲ್ಲ. ಹೀಗಾಗಿ ವಿವೇಕನಗರ ಇನ್ಸ್ಪೆಕ್ಟರ್ ಅನಿಲ್ ಕುಮಾರ್ ನೇತೃತ್ವತದ ತಂಡ ಕಾರ್ಯಾಚರಣೆ ಕೈಗೊಂಡು ಮೂವರು ಆರೋಪಿಗಳನ್ನು ಬಂಧಿಸಿದೆ. ಸುಲಿಗೆಕೋರರ ವಿರುದ್ಧ 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, 109 ಮೊಬೈಲ್ಗಳನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕೇಂದ್ರ ವಿಭಾಗದ ಪೊಲೀಸರಿಂದ 106 ಆರೋಪಿಗಳ ಬಂಧನ :ಕಳೆದೊಂದು ತಿಂಗಳಿಂದ ಕಳ್ಳತನ, ವಂಚನೆ, ಮಾದಕವಸ್ತು ಮಾರಾಟ ಸೇರಿದಂತೆ ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 103 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಬ್ಬನ್ ಪಾರ್ಕ್, ಹಲಸೂರು ಗೇಟ್, ವಿವೇಕನಗರ, ಸಂಪಂಗಿ ರಾಮನಗರ, ಹೈಗ್ರೌಂಡ್ಸ್ ಸೇರಿದಂತೆ ಕೇಂದ್ರ ವಿಭಾಗದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 103ಕ್ಕೂ ಹೆಚ್ಚು ವಿವಿಧ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸಿದ್ದು, 2 ಕೋಟಿಗಿಂತ ಹೆಚ್ಚು ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ನಗರದಲ್ಲಿ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳ ಸಮೇತ ಮಾರಾಟ ಮಾಡಲು ಮುಂದಾಗಿದ್ದ ಕೇರಳ ಮೂಲದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಕೇರಳ ಮೂಲದ ನೀರಜ್ ಜೋಸೆಫ್ ಈವೆಂಟ್ ಮ್ಯಾನೇಜ್ ಮೆಂಟ್ ಆಗಿ ಕೆಲಸ ಮಾಡುತ್ತಿದ್ದ. ಜೂನ್ 6 ರಂದು ಕ್ವೀನ್ಸ್ ರಸ್ತೆಯ ಬಸ್ ನಿಲ್ದಾಣ ಬಳಿ ಕಾರಿನಲ್ಲಿ 3 ಪಿಸ್ತೂಲ್ ಹಾಗೂ 99 ಜೀವಂತ ಗುಂಡುಗಳನ್ನು ಇಟ್ಟುಕೊಂಡು ಮಾರಾಟಕ್ಕೆ ಮುಂದಾಗಿದ್ದ.
ಈ ಬಗ್ಗೆ ಖಚಿತ ಮಾಹಿತಿ ಸಿಕ್ಕ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ದೊಡ್ಡ ಪ್ರಮಾಣದಲ್ಲಿ ಯಾರಿಗೆ ಪಿಸ್ತೂಲ್ ಮಾರಾಟಕ್ಕೆ ಮುಂದಾಗಿದ್ದ ಹಾಗು ಈತನ ವಿರುದ್ಧ ಅಪರಾಧ ಪ್ರಕರಣ ದಾಖಲಾಗಿದೆಯಾ ಎಂಬುದರ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ತಿಳಿಸಿದ್ದಾರೆ.
ಇದನ್ನೂ ಓದಿ :ನೈತಿಕ ಪೊಲೀಸ್ಗಿರಿ ಪ್ರಕರಣ: ಹಲ್ಲೆಗೊಳಗಾಗಿದ್ದ ಯುವಕನ ಸಹೋದರನಿಂದ ಪೊಲೀಸ್ ಕಮಿಷನರ್ಗೆ ದೂರು