ಕರ್ನಾಟಕ

karnataka

ETV Bharat / state

ಪ್ರಿಯಕರನ ಸ್ನೇಹಿತರಿಂದಲೇ ಯುವತಿ ಮೇಲೆ ಅತ್ಯಾಚಾರದ ಆರೋಪ: ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು - ಮಸಾಜ್ ಪಾರ್ಲರ್ ಯುವತಿ ಮೇಲೆ ಅತ್ಯಾಚಾರ

ಪ್ರಿಯಕರನ ಸ್ನೇಹಿತರಿಂದಲೇ ಯುವತಿಯ ಮೇಲೆ ಅತ್ಯಾಚಾರ ನಡೆದ ಆರೋಪ ಕೇಳಿಬಂದಿರುವ ಹಿನ್ನೆಲೆ ಆರೋಪಿಗಳ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ಮೇಲೆ ಅತ್ಯಾಚಾರ
ಯುವತಿ ಮೇಲೆ ಅತ್ಯಾಚಾರ

By

Published : Jul 16, 2023, 10:35 PM IST

ಬೆಂಗಳೂರು: ವಿವಾಹವಾಗುವುದಾಗಿ ನಂಬಿಸಿ ಅಸ್ಸೋಂನಿಂದ ಬೆಂಗಳೂರಿಗೆ ಕರೆತಂದಿದ್ದ ಪ್ರಿಯಕರನೇ ತನ್ನ ನಾಲ್ವರು ಸ್ನೇಹಿತರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿಸಿದ ಆರೋಪ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಸ್ಸೋಂ ಮೂಲದ 20 ವರ್ಷದ ಸಂತ್ರಸ್ತ ಯುವತಿ ದೂರನ್ನು ನೀಡಿದ್ದು, ಈ ಹಿನ್ನೆಲೆ ಆಕೆಯ ಪ್ರಿಯಕರ ಶಾಹೀದ್ ಉದ್ದೀನ್ ಹಾಗೂ ಆತನ ನಾಲ್ವರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರ ಆರೋಪದಡಿ ಎಫ್‌ಐಆರ್ ದಾಖಲಿಸಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪಾರ್ಕ್​ನಲ್ಲಿ ಪರಿಚಯ, ಮೊಬೈಲ್​ ಸಂಖ್ಯೆ ವಿನಿಮಯ.. ಅಸ್ಸೋಂ ಮೂಲದ ಸಂತ್ರಸ್ತೆ ಮತ್ತು ಆರೋಪಿ ಶಾಹೀದ್ ಕಳೆದ ವರ್ಷ ಪಾರ್ಕ್‌ವೊಂದರಲ್ಲಿ ಪರಸ್ಪರ ಪರಿಚಿತರಾಗಿ ಮೊಬೈಲ್ ಸಂಖ್ಯೆ ವಿನಿಮಯ ಮಾಡಿಕೊಂಡಿದ್ದರು. ಬಳಿಕ ಸ್ನೇಹಿತರಾಗಿದ್ದು, ಸ್ನೇಹ ಪ್ರೇಮಕ್ಕೆ ತಿರುಗಿ ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಆರೋಪಿ ಶಾಹೀದ್ ಮದುವೆಯಾಗುವುದಾಗಿ ಸಂತ್ರಸ್ತೆಯನ್ನು ನಂಬಿಸಿ ಕಳೆದ ಜೂನ್‌ನಲ್ಲಿ ಅಸ್ಸೋಂನಿಂದ ಬೆಂಗಳೂರಿಗೆ ಕರೆತಂದಿದ್ದ.

ದೊಡ್ಡನಾಗಮಂಗಲದ ಬಾಡಿಗೆ ಮನೆಯಲ್ಲಿ ಸಂತ್ರಸ್ತೆಯನ್ನು ಇರಿಸಿ, ಸಂತ್ರಸ್ತೆಯ ವಿರೋಧದ ನಡುವೆಯೂ ಆಕೆ ಜತೆಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಸಂಭೋಗದ ದೃಶ್ಯಗಳನ್ನು ತನ್ನ ಮೊಬೈಲ್‌ನಲ್ಲಿ ಚಿತ್ರಿಸಿಕೊಂಡಿದ್ದ. ಕೆಲ ದಿನಗಳ ಬಳಿಕ ಶಾಹೀದ್‌ಗೆ ಬೇರೆ ಮಹಿಳೆಯ ಜತೆಗೆ ಮದುವೆಯಾಗಿರುವ ವಿಚಾರ ಸಂತ್ರಸ್ತೆಗೆ ಗೊತ್ತಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ಆರೋಪಿಯು ಬೆಲ್ಟ್‌ನಿಂದ ಹಲ್ಲೆ ನಡೆಸಿ ಮನೆಯ ರೂಮ್‌ನಲ್ಲಿ ಕೂಡಿ ಹಾಕಿದ್ದ. ಬಳಿಕ ಪರಿಚಿತ ನಾಲ್ವರನ್ನು ಮನೆಗೆ ಕರೆಸಿ ಸಂತ್ರಸ್ತೆಯ ರೂಮ್‌ಗೆ ಕಳುಹಿಸಿದ್ದ. ಈ ವೇಳೆ ಸಂತ್ರಸ್ತೆ ಎಷ್ಟೇ ಬೇಡಿಕೊಂಡರೂ ಬಿಡದೆ ಗ್ಯಾಂಗ್ ರೇಪ್ ಮಾಡಿದರು ಎಂದು ದೂರಿನಲ್ಲಿ ವಿವರಿಸಲಾಗಿದೆ.

ವೇಶ್ಯಾವಾಟಿಕೆಗೆ ದೂಡಲು ಪ್ರಯತ್ನ:ವೇಶ್ಯಾವಾಟಿಕೆ ದಂಧೆಗೆ ದೂಡುವ ಉದ್ದೇಶದಿಂದ ಆರೋಪಿ ಶಾಹೀದ್ ಸಂತ್ರಸ್ತೆಯನ್ನು ಪ್ರೀತಿಸುವ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಅಸ್ಸೋಂನಿಂದ ಬೆಂಗಳೂರಿಗೆ ಕರೆತಂದಿರುವುದು ಗೊತ್ತಾಗಿದೆ. ಬಳಿಕ ಸಂತ್ರಸ್ತೆ ಮನೆಯಿಂದ ತಪ್ಪಿಸಿಕೊಂಡು ಹೊರಬಂದು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಬಂದು ತನ್ನ ಮೇಲಾದ ಗ್ಯಾಂಗ್ ರೇಪ್ ಹಾಗೂ ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳಲು ಯತ್ನಿಸಿದ ಆರೋಪದಡಿ ಪ್ರಿಯಕರ ಶಾಹೀದ್ ಹಾಗೂ ಆತನ ಸ್ನೇಹಿತರ ವಿರುದ್ಧ ದೂರು ನೀಡಿದ್ದಾಳೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಮಸಾಜ್ ಪಾರ್ಲರ್ ಯುವತಿ ಮೇಲೆ ಅತ್ಯಾಚಾರ: ಇನ್ನೊಂದೆಡೆ ಮಸಾಜ್ ಪಾರ್ಲರ್​ನಲ್ಲಿ​ ಕೆಲಸ ಮಾಡುತ್ತಿದ್ದ ಯುವತಿ ಮೇಲೆ‌ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಜಯನಗರ ಪೊಲೀಸರು ಓರ್ವನನ್ನು (ಫೆಬ್ರವರಿ 22-2023)ರಂದು ಬಂಧಿಸಿದ್ದರು. ಬಂಧಿತನನ್ನು ರವೀಂದ್ರ ಶೆಟ್ಟಿ ಎಂದು ಗುರುತಿಸಲಾಗಿತ್ತು. ಜಯನಗರದ ಪಾರ್ಲರ್​ನಲ್ಲಿ‌ ಈತ ದುಷ್ಕೃತ್ಯ ಎಸಗಿದ್ದ.

ಈತ ಪದೇ ಪದೆ ಸಲೂನ್​ಗೆ ಬಂದು ಮಸಾಜ್ ಮಾಡಿಸಿಕೊಳ್ಳುತ್ತಿದ್ದ. ಫೆಬ್ರವರಿ 14ರಂದು ದುಷ್ಕೃತ್ಯ ಎಸಗಿದ್ದ. ಅಸಭ್ಯವಾಗಿ ವರ್ತಿಸಿದ್ದಲ್ಲದೇ ಜಾತಿ ನಿಂದನೆ ಮಾಡಿರುವುದಾಗಿಯೂ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಳು. ಜಯನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ಅತ್ಯಾಚಾರ ಮತ್ತು ಜಾತಿನಿಂದನೆಯಡಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಬೆಂಗಳೂರು: ಮಸಾಜ್​ ಪಾರ್ಲರ್‌​ ಯುವತಿ ಮೇಲೆ ಅತ್ಯಾಚಾರ, ಓರ್ವನ ಬಂಧನ

ABOUT THE AUTHOR

...view details