ಬೆಂಗಳೂರು:ಬೆಳ್ಳಂದೂರಿನಲ್ಲಿರುವ ಖಾಸಗಿ ಕಂಪನಿಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಂಪನಿಯ ಮಾಜಿ ಉದ್ಯೋಗಿ ನವನೀತ್ ಪ್ರಸಾದ್ ಬಂಧಿತ ಆರೋಪಿ. ಜೂನ್ 13 ರಂದು ಬೆಳಗ್ಗೆ ಬೆಳ್ಳಂದೂರಿನ ಹೊರವರ್ತುಲ ರಸ್ತೆಯಲ್ಲಿರುವ ಖಾಸಗಿ ಕಂಪನಿಗೆ ಕರೆ ಮಾಡಿದ್ದ ಅನಾಮಿಕ 'ಕಂಪನಿಯಲ್ಲಿ ಬಾಂಬ್ ಇಟ್ಟಿದ್ದು ಕೆಲ ಹೊತ್ತಿನಲ್ಲಿ ಬಾಂಬ್ ಸ್ಪೋಟಗೊಳ್ಳಲಿದೆ' ಎಂದಿದ್ದ.
ಆತಂಕಗೊಂಡು ಕಾರ್ಯಪ್ರವೃತ್ತರಾದ ಕಂಪನಿ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ತಂಡ ದೌಡಾಯಿಸಿ ಮೂಲೆ - ಮೂಲೆಯಲ್ಲಿ ಜಾಲಾಡಿದ ನಂತರ ಅದೊಂದು ಹುಸಿ ಬಾಂಬ್ ಕರೆ ಎಂದು ಖಚಿತವಾಗಿತ್ತು. ಪ್ರಕರಣ ದಾಖಲಿಸಿಕೊಂಡ ಬೆಳ್ಳಂದೂರು ಪೊಲೀಸರು ಬಾಂಬ್ ಕರೆ ಬಂದ ಮೊಬೈಲ್ ನಂಬರ್ ಪರಿಶೀಲಿಸಿದಾಗ ಕಂಪನಿಯ ಮಾಜಿ ಉದ್ಯೋಗಿಯಾಗಿರುವ ನವನೀತ್ ಪ್ರಸಾದ್ ಕರೆ ಮಾಡಿರುವುದು ತಿಳಿದು ಬಂದಿತ್ತು.
ಟೀಂ ಲೀಡರ್ ಹಾಗೂ ಆರೋಪಿ ನವನೀತ್ ನಡುವೆ ಜಗಳವಾಗಿತ್ತು. ಈ ವೇಳೆ, ಆರೋಪಿ ತಾನು ಕಂಪನಿಯ ಎಂಡಿ ಅವರನ್ನು ಭೇಟಿಯಾಗಬೇಕು ಎಂದಿದ್ದ. ಆದರೆ, ಭೇಟಿಗೆ ಅವಕಾಶ ನೀಡದೇ ಕೆಟ್ಟ ನಡವಳಿಕೆ ಕಾರಣ ನೀಡಿ ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದರಿಂದ ಆಕ್ರೋಶಗೊಂಡಿದ್ದ ನವನೀತ್ ಕಂಪನಿಗೆ ಹುಸಿ ಬಾಂಬ್ ಕರೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ. ಕಂಪನಿ ಸಿಬ್ಬಂದಿ ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡಿದ್ದ ಪೊಲೀಸರು ಸದ್ಯ ಆರೋಪಿಯನ್ನು ಬಂಧಿಸಿದ್ದಾರೆ.
ಬಾಂಬ್ ಕರೆ ಮಾಡಿ ಸಿಕ್ಕಿ ಬಿದ್ದ ಪ್ರಯಾಣಿಕ: ಫೆಬ್ರವರಿ ತಿಂಗಳಿನಲ್ಲಿ ಹೈದರಬಾದ್ನಲ್ಲಿ ಪ್ರಯಾಣಿಕನೊಬ್ಬ ವಿಮಾನ ತಪ್ಪುವುದನ್ನು ತಡೆಯಲು ಹುಸಿ ಬಾಂಬ್ ಕರೆ ಮಾಡಿ ಬಂಧನಕ್ಕೊಳಗಾಗಿದ್ದ. ಇಂಡಿಗೋ ಏರ್ಲೈನ್ಸ್ನ ವಿಮಾನ ಬೆಳಗ್ಗೆ 10:15 ಕ್ಕೆ ಹೈದರಾಬಾದ್ನಿಂದ ಚೆನ್ನೈಗೆ ಹೊರಡಬೇಕಿತ್ತು. ವಿಮಾನದಲ್ಲಿ 118 ಜನರಿದ್ದರು.
ಎಲ್ಲ ಭದ್ರತಾ ತಪಾಸಣೆಯ ನಂತರ ಅವರೆಲ್ಲರೂ ವಿಮಾನವನ್ನು ಹತ್ತುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕರೆಯೊಂದು ಬಂದು ವಿಮಾನದಲ್ಲಿ ಬಾಂಬ್ ಇದೆ ಎಂದು ಆರೋಪಿ ಹೇಳಿದ್ದಾನೆ. ಇದರಿಂದ ಆತಂಕಕ್ಕೀಡಾದ ಸಿಬ್ಬಂದಿ ಇಡೀ ವಿಮಾನವನ್ನು ಪರಿಶೀಲಿಸಿದ್ದಾರೆ. ಇದರಿಂದ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಭಾರೀ ಕೋಲಾಹಲ ಉಂಟಾಗಿತ್ತು.
ಬಾಂಬ್ ಪತ್ತೆ ದಳವನ್ನು ತಕ್ಷಣವ ವಿಮಾನ ನಿಲ್ದಾಣಕ್ಕೆ ಕರೆಸಿ, ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಇಳಿಸಿ ತಪಾಸಣೆ ನಡೆಸಲಾಗಿತ್ತು. ಆದರೆ, ವಿಮಾನದಲ್ಲಿ ಬಾಂಬ್ ಇರಲಿಲ್ಲ. ಇದು ಹುಸಿ ಕರೆ ಎಂದು ತಿಳಿದ ಪೊಲೀಸರು ಬಾಂಬ್ ಕರೆ ಮಾಡಿದ ಸಂಖ್ಯೆಯನ್ನು ಪತ್ತೆ ಮಾಡಿದ್ದರು. ಆ ಮೊಬೈಲ್ ನಂಬರ್ ಅನ್ನು ಟ್ರಾಕ್ ಮಾಡಿದಾಗ ಅದು ಹೈದರಾಬಾದ್ ವಿಮಾನ ನಿಲ್ದಾಣದಲ್ಲೇ ಇರುವುದು ತೋರಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಚೆನ್ನೈಗೆ ಹೊರಡಲು ಸಜ್ಜಾಗಿದ್ದ ವಿಮಾನವನ್ನು ಹತ್ತುತ್ತಿದ್ದ ಅಂದರೆ ಹುಸಿ ಕರೆ ಮಾಡಿದ ಪ್ರಯಾಣಿಕನನ್ನು ಬಂಧಿಸಿದ್ದರು.
ಇದನ್ನೂ ಓದಿ:Hoax bomb call: ಬೆಂಗಳೂರಿನ ಐಟಿ ಕಂಪೆನಿಗೆ ಮಾಜಿ ಉದ್ಯೋಗಿಯಿಂದ ಹುಸಿ ಬಾಂಬ್ ಬೆದರಿಕೆ ಕರೆ!