ಬೆಂಗಳೂರು:ಪ್ರಿಯತಮೆ ನಿರ್ಲಕ್ಷಿಸುತ್ತಿದ್ದಾಳೆ ಎಂದು ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಆರೋಪಿಯನ್ನ ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಿಯತಮೆ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದ ರವಿಕುಮಾರ್ (27) ಎಂಬಾತನನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ರವಿಕುಮಾರ್ ಬೆಂಗಳೂರಿನಲ್ಲಿ ನೆಲೆಸಿದ್ದ. ಇಂದಿರಾ ನಗರದ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯೊಂದರಲ್ಲಿ ರವಿಕುಮಾರ್ ಕೆಲಸ ಮಾಡುತ್ತಿದ್ದು, ಅದೇ ಕಂಪನಿಗೆ ಇಂಟರ್ನ್ ಆಗಿ ಯುವತಿ ಸೇರಿದ್ದಳು. ಈಕೆಯು ಸಹ ಪಶ್ಚಿಮ ಬಂಗಾಳ ಮೂಲದವಳಾದ್ದರಿಂದ ಇಬ್ಬರ ನಡುವಿನ ಪರಿಚಯ ಬಳಿಕ ಪ್ರೇಮಾಂಕುರವಾಗಿತ್ತು. ಇಬ್ಬರ ಕುರಿತು ಎರಡೂ ಕುಟುಂಬಗಳಿಗೂ ತಿಳಿದಿತ್ತು. ಆದರೆ ಇತ್ತೀಚೆಗೆ ಬೇರೆ ಕಂಪನಿ ಸೇರಿಕೊಂಡಿದ್ದ ಯುವತಿ, ರವಿಕುಮಾರ್ನನ್ನು ನಿರ್ಲಕ್ಷಿಸಲಾರಂಭಿಸಿದ್ದಳು.
ಪ್ರಿಯತಮೆ ತನ್ನ ಕರೆಗಳಿಗೆ ಉತ್ತರಿಸುತ್ತಿರಲಿಲ್ಲ, ಸರಿಯಾಗಿ ಮಾತನಾಡುತ್ತಿಲ್ಲವೆಂದು ರವಿಕುಮಾರ್ ಕೋಪಗೊಂಡಿದ್ದ. ಬುಧವಾರ ಮುಂಜಾನೆ 3:30ರ ಸುಮಾರಿಗೆ ಪ್ರಿಯತಮೆಯ ಮನೆಗೆ ತೆರಳಿ ಆಕೆಯನ್ನು ಮೈಕೋ ಲೇಔಟಿನ ತನ್ನ ಪಿಜಿ ಬಳಿ ಕರೆತಂದಿದ್ದ ರವಿಕುಮಾರ್ ಆಕೆಯ ಬಳಿ ಮಾತನಾಡುತ್ತಲೇ ಕಬ್ಬಿಣದ ರಾಡ್ ನಿಂದ ತಲೆಗೆ ಹಲ್ಲೆ ಮಾಡಿದ್ದ. ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಮೈಕೋ ಲೇಔಟ್ ಠಾಣಾ ಪೊಲೀಸರು ಆರೋಪಿ ರವಿಕುಮಾರ್ನನ್ನು ಬಂಧಿಸಿದ್ದಾರೆ. ಗಾಯಗೊಂಡಿದ್ದ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.