ಬೆಂಗಳೂರು:ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮುನೇಶ್ವರ ನಗರದ ನಿವಾಸಿ ಶ್ರೀದೇವಿ ತೀವ್ರ ಹಲ್ಲೆಗೊಳಗಾಗಿದ್ದು, ಈಕೆ ನೀಡಿದ ದೂರಿನ ಮೇರೆಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ನಜೀರ್, ಈತನ ಪುತ್ರ ಸದ್ದಾಂ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.
ಮುನೇಶ್ವರ ನಗರದಲ್ಲಿ ಕಳೆದ 16 ವರ್ಷಗಳಿಂದ ಶ್ರೀದೇವಿ ವಾಸವಾಗಿದ್ದಳು. ಈಕೆ ಉಳಿದುಕೊಂಡಿದ್ದ ಕಟ್ಟಡದಲ್ಲಿ ನಜೀರ್ ವಾಸವಾಗಿದ್ದ. 15 ಕ್ಕಿಂತ ಹೆಚ್ಚು ಮನೆಗಳಿರುವ ಕಟ್ಟಡಕ್ಕೆ ಫಯಾಜ್ ಎಂಬಾತ ಮಾಲೀಕನಾಗಿದ್ದಾನೆ. ಆದರೆ ವಿದೇಶದಲ್ಲಿರುವ ಕಾರಣ ಶ್ರೀದೇವಿಗೆ ಬಾಡಿಗೆ ಸಂಗ್ರಹಿಸಿ ತನಗೆ ನೀಡುವಂತೆ ಸೂಚಿಸಿದ್ದ. ಇದರಂತೆ ಪ್ರತಿ ತಿಂಗಳ ಮನೆ ಬಾಡಿಗೆ ಹಣ ಸಂಗ್ರಹಿಸಿ ಮನೆ ಮಾಲೀಕರಿಗೆ ಶ್ರೀದೇವಿ ನೀಡುತ್ತಿದ್ದಳು.
ಇದೇ ತಿಂಗಳು ಬಾಡಿಗೆ ಹಣ ಕೇಳಲು ನಜೀರ್ ಮನೆಗೆ ಶ್ರೀದೇವಿ ಹೋಗಿದ್ದಳು. ಹಣ ಕೇಳಿದ್ದಕ್ಕೆ ಮಹಿಳೆಗೆ ಅಶ್ಲೀಲವಾಗಿ ಬೈದಿದ್ದಾನೆ. ಮೂರು ತಿಂಗಳಿಂದ ಕೊಡದಿರುವ ಮೂರು ತಿಂಗಳ ಬಾಡಿಗೆ ಹಣ ಕೊಡಬೇಕು ಎಂದು ಜೋರು ಧ್ವನಿಯಲ್ಲಿ ಕೇಳಿದ್ದಾಳೆ. ಇದರಿಂದ ಅಕ್ರೋಶಗೊಂಡ ನಜೀರ್, ಮಗ ಸದ್ದಾಂ ಸಹ ಬೈದಿದ್ದು ಅಲ್ಲದೆ ಮನೆಯಲ್ಲಿದ್ದ ತರಕಾರಿ ಕತ್ತರಿಸುವ ಚಾಕುವಿನಿಂದ ಆಕೆಯ ಮುಖ ಕೈಗಳಿಗೆ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ಗಾಯಗೊಂಡ ಶ್ರೀದೇವಿ ಕುಸಿದುಬಿದ್ದಿರುವುದನ್ನು ಕಂಡು ಸ್ಥಳದಿಂದ ಅಪ್ಪ-ಮಗ ಎಸ್ಕೇಪ್ ಆಗಿದ್ದರು. ನಂತರ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶ್ರೀದೇವಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಜಾಮೀನು ಪಡೆದು ಆರೋಪಿಗಳು ಹೊರಬಂದಿದ್ದಾರೆ.
ಅಕ್ರಮ ಮರಳುಗಾರಿಗೆ ದಾಳಿ ನಡೆಸಿದ ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ: ರಾಯಚೂರಿನ ಮಾನವಿ ತಾಲೂಕಿನ ಚಿಕಲಪರ್ವಿ ಗ್ರಾಮ ಹಾಗು ವಿವಿಧೆಡೆಯಲ್ಲಿ ಗಣಿ ಹಾಗೂ ಭೂ ವಿಜ್ಞಾನ ಅಧಿಕಾರಿಗಳು ದಾಳಿ ನಡೆಸಿ ಮರಳು ಸಾಗಣೆಗೆ ಬಳಸುತ್ತಿದ್ದ ಟಿಪ್ಪರ್ ಹಾಗೂ ಜೆಸಿಬಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ತಂಡವೊಂದು ಆಗಮಿಸಿ ರಕ್ಷಣಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದು, ಗಾಯಗೊಂಡಿರುವ ಸಿಬ್ಬಂದಿಯ ಸ್ಥಿತಿ ಚಿಂತಾಜನಕವಾಗಿದೆ. ಅಧಿಕಾರಿ ನೀಲಪ್ಪ ಎನ್ನುವವರು ಹಲ್ಲೆಗೊಳಗಾದವರು. ಇವರಿಗೆ ರಾಯಚೂರಿನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಾನ್ವಿ ಪೊಲೀಸರು ಮತ್ತು ಮೈನಿಂಗ್ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ತುಂಗಭದ್ರಾ ನದಿ ತೀರದಲ್ಲಿ ಅಕ್ರಮ ಮರಳುಗಾರಿಕೆ ದಂಧೆ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಜಪ್ತಿ ಮಾಡಿಕೊಂಡಿದ್ದ ವಾಹನಗಳನ್ನು ತೆಗೆದುಕೊಂಡು ಹೋಗುವ ವೇಳೆ ಆಗಮಿಸಿದ 6 ಮಂದಿಯ ಗುಂಪು ಅಧಿಕಾರಿಗಳ ಮೇಲೆ ಕಬ್ಬಿಣದ ಸಲಾಕೆಗಳಿಂದ ದಾಳಿ ನಡೆಸಿದ್ದಾರೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 143, 147, 148, 307, 323, 326, 341, 343 , 504, 506 ಸೇರಿದಂತೆ 149 ರ ಅಡಿ ಪ್ರಕರಣ ದಾಖಲಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ: ಕ್ಯಾಬ್ ಚಾಲಕ ಪೊಲೀಸ್ ವಶಕ್ಕೆ