ಬೆಂಗಳೂರು:ಹಾಡಹಗಲೇ ಮನೆಗೆ ನುಗ್ಗಿ ಹೆಂಡತಿ ಎದುರೇ ಟೆಲಿಕಾಂ ನಿವೃತ್ತ ನೌಕರನನ್ನು ಕೋಳಿ ವ್ಯಾಪಾರಿ ಹಾಗೂ ಆತನ ಪುತ್ರ ಕೊಲೆ ಮಾಡಿದ್ದಾರೆ. ಜೆ.ಪಿ. ನಗರ 1ನೇ ಹಂತದ ನಿವಾಸಿ ಕೆ.ವೆಂಕಟೇಶಪ್ಪ (76) ಮೃತ ನಿವೃತ್ತ ನೌಕರ. ಇಂದು ಮಧ್ಯಾಹ್ನ 1 ಗಂಟೆಯಲ್ಲಿ ಕೃತ್ಯ ನಡೆದಿದೆ. ಬಸವೇಶ್ವರನಗರದ ಕೋಳಿ ಅಂಗಡಿ ಮಾಲೀಕ ನಾಗರಾಜು ಮತ್ತು ಈತನ ಪುತ್ರ ಅಭಿಷೇಕ್ ಶಂಕಿತ ಆರೋಪಿ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಟೆಲಿಕಾಂ ಕಂಪನಿ ನಿವೃತ್ತ ನೌಕರ ವೆಂಕಟೇಶಪ್ಪ, ಜೆ.ಪಿ.ನಗರ ಮತ್ತು ಬಸವೇಶ್ವರ ನಗರದಲ್ಲಿ ಸ್ವಂತ ಮನೆಗಳನ್ನು ಹೊಂದಿದ್ದರು. ಜೆ.ಪಿ. ನಗರದ ಮನೆಯಲ್ಲಿ ವೆಂಕಟೇಶಪ್ಪ, ತನ್ನ ಪತ್ನಿ ಮಂಜುಳಾ ಜೊತೆಗೆ ನೆಲೆಸುತ್ತಿದ್ದರು. ಮೊದಲ ಮಹಡಿಯಲ್ಲಿ ಮೊದಲ ಪುತ್ರ ಶ್ರೀಧರ್ ಮತ್ತು 2ನೇ ಮಹಡಿಯಲ್ಲಿ ಹರೀಶ್ ಕುಟುಂಬ ವಾಸವಾಗಿದೆ.
ಆರೋಪಿಗಳು ಹಾಗೂ ವೆಂಕಟೇಶಪ್ಪ ನಡುವೆ ಜಟಾಪಟಿ:ಬಸವೇಶ್ವರ ನಗರದಲ್ಲಿ ಇರುವ ಮನೆಗಳನ್ನು ಬಾಡಿಗೆಗೆ ಕೊಟ್ಟಿದ್ದರು. ಇಲ್ಲಿನ ಮನೆಯ ಮುಂದೆ ಆರೋಪಿತರು ಕೋಳಿ ಅಂಗಡಿ ನಡೆಸುತ್ತಿದ್ದರು. ಅಂಗಡಿಯಿಂದ ದುರ್ವಾಸನೆ ಬರುತ್ತಿದೆ ಎಂದು ಬಾಡಿಗೆದಾರರು ಮತ್ತು ಅಕ್ಕಪಕ್ಕದ ನಿವಾಸಿಗಳು ವೆಂಕಟೇಶಪ್ಪಗೆ ದೂರು ನೀಡಿದ್ದರು. ಈ ಬಗ್ಗೆ ವೆಂಕಟೇಶಪ್ಪ, ಕೋಳಿ ಅಂಗಡಿ ಮಾಲೀಕನಿಗೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದರು. ಇಲ್ಲವಾದರೆ, ಬಿಬಿಎಂಪಿಗೆ ದೂರು ಕೊಡುವುದಾಗಿ ಎಚ್ಚರಿಕೆ ಸಹ ಕೊಟ್ಟಿದ್ದರು ಎನ್ನಲಾಗಿದೆ. ಇದೇ ವಿಚಾರವಾಗಿ ಆರೋಪಿಗಳು ಮತ್ತು ವೆಂಕಟೇಶಪ್ಪ ನಡುವೆ ಜಟಾಪಟಿ ನಡೆದಿತ್ತು.