ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಬೆಂಗಳೂರು:ಆನ್‌ಲೈನ್ ಇ-ಕಾಮರ್ಸ್ ಕಂಪನಿಗಳಿಂದ ಬರುವ ಕ್ಯಾಶ್ ಆನ್ ಡೆಲವರಿ ಆರ್ಡರ್ ದತ್ತಾಂಶಗಳನ್ನು ಕಳವು ಮಾಡಿ ಗ್ರಾಹಕರಿಗೆ ಅಸಲಿ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನ ಕಳುಹಿಸಿ, ಗ್ರಾಹಕರು ಮತ್ತು ಕಂಪನಿಗೆ ನಷ್ಟವುಂಟು ಮಾಡುತ್ತಿದ್ದ ಸೈಬರ್ ವಂಚಕರನ್ನು ಬೆಂಗಳೂರು ಉತ್ತರ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮುಂಬೈ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಲ್ಲಿ ಕುಳಿತು ಎರಡು ವರ್ಷಗಳಿಂದ 70 ಲಕ್ಷ ರೂ. ವಂಚಿಸಿದ್ದ ಒಟ್ಟು 21 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಶಿವಪ್ರಕಾಶ್ ದೇವರಾಜು ಮಾತನಾಡಿ, " ಇ-ಕಾಮರ್ಸ್ ಕಂಪನಿಗಳು, ಆರ್ಡರ್ ಡೆಲವರಿ ಮಾಡುವ ಶಿಪ್ಮೆಂಟ್ ಕಂಪನಿಗಳ ನಡುವಿನ ಡೇಟಾ ಕಳವು ಮಾಡುತ್ತಿದ್ದ ಆರೋಪಿಗಳು, ಕ್ಯಾಶ್ ಆನ್ ಡೆಲವರಿ ಆರ್ಡರ್ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಅಂಥಹ ಆರ್ಡರ್ಗಳಿಗೆ ವಿವಿಧ ಕೋರಿಯರ್ ಕಂಪನಿಗಳ ಸರ್ವಿಸ್‌ಗಳನ್ನು ಬಳಸಿಕೊಂಡು ಅಸಲಿ ವಸ್ತುಗಳ ಬದಲಾಗಿ ನಕಲಿ ವಸ್ತುಗಳನ್ನು ಮೊದಲೇ ತಲುಪಿಸಿ ಹಣವನ್ನ ಪಡೆದುಕೊಳ್ಳುತ್ತಿದ್ದರು. ಎರಡು ದಿನಗಳ ನಂತರ ನೈಜ ವಸ್ತುಗಳು ಗ್ರಾಹಕರ ಕೈ ಸೇರಿದಾಗ ನಕಲಿ ವಸ್ತುವನ್ನು ಇ-ಕಾಮರ್ಸ್ ಪೊರ್ಟಲ್ ಮುಖಾಂತರ ವಾಪಸ್ ಕಳುಹಿಸಿ ನಷ್ಟ ಉಂಟಾಗುವಂತೆ ಮಾಡುತ್ತಿದ್ದರು" ಎಂದರು.
"2021ರ ಜೂನ್‌ನಿಂದ ಇಲ್ಲಿಯವರೆಗೂ ಸುಮಾರು 70 ಲಕ್ಷ ರೂ. ಹಣ ನಷ್ಟವಾಗಿದೆಯೆಂದು ಶಿಪ್ಮೆಂಟ್ ಕಂಪನಿಯವರು ಉತ್ತರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳು ಗ್ರಾಹಕರಿಗೆ ಕಳುಹಿಸುತ್ತಿದ್ದ ನಕಲಿ ಶಿಪ್ ಮೆಂಟ್‌ನಲ್ಲಿರುವ ಎಡ್ಯೂಬಿ (ಎ.ವೇ.ಬಿಲ್) ನಂಬರ್, ಕೋರಿಯರ್ ಸಬ್ ಶಿಪರ್ ಆದ ನಿಂಬಸ್ ಪೋಸ್ಟ್ನ ಮಾಹಿತಿ, ಕೆವೈಸಿ ಮತ್ತು ಬ್ಯಾಂಕ್ ಖಾತೆಯ ಮಾಹಿತಿಗಳನ್ನ ಕಲೆಹಾಕಿ ಅದರ ಆಧಾರದಲ್ಲಿ ಮುಂಬೈ, ಗುಜರಾತ್, ಮಧ್ಯಪ್ರದೇಶ ರಾಜ್ಯಗಳಿಂದ ಒಟ್ಟು 21 ಜನ ಆರೋಪಿಗಳನ್ನು ಬಂಧಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಆರೋಪಿಗಳು ಕಳುವು ಮಾಡಿದ ಡೇಟಾವನ್ನ ಮಾರಾಟ ಮಾಡಿ ಹಣ ಸಂಪಾದನೆ ಮಾಡಿರುವುದು ಸಹ ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಬಂಧಿತರ ಖಾತೆಗಳಲ್ಲಿದ್ದ 19,45,135 ರೂ. ಮತ್ತು 7,50,000 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಕೃತ್ಯಕ್ಕೆ ಬಳಕೆ ಮಾಡುತ್ತಿದ್ದ 11 ಮೊಬೈಲ್ ಫೋನ್‌ಗಳು, 3 ಲ್ಯಾಪ್‌ಟಾಪ್ ಮತ್ತು ಹಾರ್ಡ್‌ಡಿಸ್ಕ್ ವಶಕ್ಕೆ ಪಡೆಯಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಸಿಬಿಐ ಸೋಗಿನಲ್ಲಿ ದರೋಡೆ ಮಾಡಿದ್ದ ಐವರು ಆರೋಪಿಗಳು ಅಂದರ್.. 1 ಕೋಟಿ ರೂ. ಒಡಿಶಾ ಪೊಲೀಸರ ವಶ