ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ-ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಆತಿಥ್ಯವಹಿಸುತ್ತಿರುವ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ಅಕ್ಟೋಬರ್ 20ರಂದು ಪಂದ್ಯ ನಡೆಯಲಿದೆ. ಇಲ್ಲಿ ನಡೆಯುತ್ತಿರುವ ಮೊದಲ ವಿಶ್ವಕಪ್ ಪಂದ್ಯಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಸಿದ್ಧತೆಗಳನ್ನು ಮಾಡಿಕೊಂಡಿದೆ. ಟಿಕೆಟ್ಗಳು ಬಹುತೇಕ ಸೋಲ್ಡೌಟ್ ಆಗಿವೆ.
ಇಸ್ರೇಲ್-ಪ್ಯಾಲೆಸ್ಟೈನ್ ಪರ-ವಿರೋಧದ ಅಭಿಪ್ರಾಯಕ್ಕೆ ವೇದಿಕೆಯಾಗದಂತೆ ಎಚ್ಚರಿಕೆ:ಇಸ್ರೇಲ್ ಹಾಗೂ ಪ್ಯಾಲೆಸ್ಟೈನ್ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಉದ್ದೇಶದಿಂದ ಕೆಲವು ಸಂಘಟನೆಗಳು ಪಂದ್ಯದ ಸಂದರ್ಭವನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಪಂದ್ಯ ಸಂದರ್ಭದಲ್ಲಿ ಇಸ್ರೇಲ್ ಅಥವಾ ಪ್ಯಾಲೆಸ್ಟೈನ್ಗೆ ಬೆಂಬಲ ಸೂಚಿಸುವಂತಹ ಪೋಸ್ಟರ್ ಹಾಗೂ ಬ್ಯಾನರ್‌ಗಳನ್ನು ಹಿಡಿದು ಘೋಷಣೆ ಕೂಗಲು ಕೆಲವು ಸಂಘಟನೆಗಳು ತಯಾರಿ ನಡೆಸಿವೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅಲರ್ಟ್ ಆಗಿರುವ ಪೊಲೀಸರು ವೀಕ್ಷಣೆಗೆ ಬರುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಲು ಸಿದ್ಧರಾಗಿದ್ದಾರೆ.
ಪಾಕ್ ಆಟಗಾರರಿಗೆ ಜ್ವರ: ಶನಿವಾರ ಅಹಮದಾಬಾದ್ನಲ್ಲಿ ನಡೆದ ಪಂದ್ಯದ ನಂತರ ಭಾನುವಾರ ಪಾಕಿಸ್ತಾನ ತಂಡ ಬೆಂಗಳೂರಿಗೆ ಬಂದಿಳಿಯಿತು. ನಗರ ತಲುಪಿದ ನಂತರ ಆಟಗಾರರು ಜ್ವರಕ್ಕೆ ತುತ್ತಾಗಿದ್ದಾರೆ ಎಂದು ಪಾಕಿಸ್ತಾನ ತಂಡದ ವಕ್ತಾರರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಇದೀಗ ಹೆಚ್ಚಿನ ಆಟಗಾರರು ಚೇತರಿಸಿಕೊಂಡಿದ್ದು, ಕೆಲವರು ವೈದ್ಯಕೀಯ ನಿಗದಲ್ಲಿದ್ದಾರೆ ಎನ್ನಲಾಗಿದೆ. ತಂಡದ ನಾಯಕ ಬಾಬರ್ ಅಜಮ್ ಮತ್ತು ವೇಗಿ ಶಾಹಿನ್ ಆಫ್ರಿದಿ ಚೇತರಿಸಿಕೊಂಡಿದ್ದು ಅಭ್ಯಾಸದಲ್ಲಿ ತೊಡಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.