ಬೆಂಗಳೂರು :ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಅನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420ರ ಅಡಿ ವಂಚನೆ ಅಪರಾಧ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕರ್ನಾಟಕ ಪ್ರೀಮಿಯರ್ ಲೀಗ್ ಆಟಗಾರರು ಹಾಗೂ ಇತರರ ವಿರುದ್ದ ದಾಖಲಿಸಿದ್ದ ಎಫ್ಐಆರ್ ಅನ್ನು ರದ್ದುಪಡಿಸಿ ಆದೇಶಿಸಿದೆ.
ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 420 (ವಂಚನೆ) ಹಾಗು 120 ಬಿ (ಪಿತೂರಿ) ಅಡಿ ದಾಖಲಿಸಿರುವ ಎಫ್ಐಆರ್ ಹಾಗೂ ನಗರದ 1ನೇ ಎಸಿಎಂಎಂ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಕೆಪಿಎಲ್ ಆಟಗಾರರಾದ ಸಿ ಎಂ ಗೌತಮ್, ಅಬ್ರಾರ್ ಕಾಜಿ, ಬುಕ್ಕಿ ಅಮಿತ್ ಮವಿ ಹಾಗೂ ಬೆಳಗಾವಿ ಪ್ಯಾಂಥರ್ಸ್ ತಂಡದ ಮಾಲೀಕ ಅಶ್ಫಾಕ್ ಸಲ್ಲಿಸಿದ್ದ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ಧ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ ಆಟಗಾರರು ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿದ್ದಾಗ ಸಹಜವಾಗಿಯೇ ಕ್ರೀಡಾಪ್ರಿಯರಿಗೆ ವಂಚನೆ ಮಾಡಿದ ಭಾವನೆ ಮೂಡುತ್ತದೆ. ಆದರೆ, ಈ ಭಾವನೆಯು ಅಪರಾಧಕ್ಕೆ ಕಾರಣವಾಗುವುದಿಲ್ಲ. ಗೇಮ್ ಆಫ್ ಚಾನ್ಸ್ ಅಥ್ಲೆಟಿಕ್ ಆಟಗಳಿಗೆ ಅಥವಾ ಕ್ರೀಡೆಗೆ ಅನ್ವಯಿಸುವುದಿಲ್ಲ ಎಂದು ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 2(7)ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಕ್ರಿಕೆಟ್ ಒಂದು ಕ್ರೀಡೆಯಾಗಿದ್ದು, ಬೆಟ್ಟಿಂಗ್ ಕಟ್ಟಿದ್ದಲ್ಲಿ ಅದು ಗೇಮಿಂಗ್ ಅರ್ಥದಲ್ಲಿ ಬರುವುದಿಲ್ಲ ಎಂದಿದೆ.
ಅಲ್ಲದೇ, ಮ್ಯಾಚ್ ಫಿಕ್ಸಿಂಗ್ ಆಟಗಾರನ ಅಪ್ರಮಾಣಿಕತೆ, ಅಶಿಸ್ತು ಹಾಗೂ ಮಾನಸಿಕ ಭ್ರಷ್ಟಾಚಾರವನ್ನು ತೋರಿಸುತ್ತದೆ. ಇಂತಹ ಆಟಗಾರರ ವಿರುದ್ಧ ಬಿಸಿಸಿಐ ನಿಯಮಾನುಸಾರ ಶಿಸ್ತು ಕ್ರಮ ಜರುಗಿಸಬಹುದು. ಆದರೆ, ಐಪಿಸಿ ಸೆಕ್ಷನ್ 420ರ ಅಡಿ ಎಫ್ಐಆರ್ ದಾಖಲಿಸಲು ಅವಕಾಶವಿಲ್ಲ. ಇನ್ನು ಬೇರೊಂದು ಪ್ರಕರಣದ ವಿಚಾರಣೆ ವೇಳೆ ಆರೋಪಿಯಿಂದ ಸಿಕ್ಕ ಮಾಹಿತಿ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಇಂತಹ ಮಾಹಿತಿ ಸಿಕ್ಕಾಗ ಅದನ್ನು ಎಫ್ಐಆರ್ ದಾಖಲಿಸಲು ಸೀಮಿತವಾಗಿ ಅಷ್ಟೇ ಬಳಸಬಹುದು. ಆರೋಪಿತನ ಹೇಳಿಕೆಯನ್ನು ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸಲು ಬಳಸಲಾಗದು ಎಂದು ಅಭಿಪ್ರಾಯಪಟ್ಟು ಎಫ್ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ರದ್ದುಪಡಿಸಿ ಆದೇಶಿಸಿದೆ.