ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ವೆಂಕಟೇಶ್ ಪ್ರಸಾದ್ ಬೆಂಗಳೂರು:ಸಾಮಾಜಿಕ ಉದ್ದೇಶದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಇಂದು ನಡೆಯುವ 'ಒನ್ ವರ್ಲ್ಡ್ ಒನ್ ಫ್ಯಾಮಿಲಿ' ಹೆಸರಿನ ಟಿ20 ಕ್ರಿಕೆಟ್ ಪಂದ್ಯಕ್ಕೆ ಪೂರ್ವಭಾವಿಯಾಗಿ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್, ವೆಂಕಟೇಶ್ ಪ್ರಸಾದ್, ಮಕಾಯ್ ಎಂಟಿನಿ ಸೇರಿದಂತೆ ಇನ್ನಿತರರು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ಪಂದ್ಯದ ಆಯೋಜಕರಾದ ಸಾಯಿ ಗ್ಲೋಬಲ್ ಹುಮ್ಯಾನಿಟೇರಿಯನ್ ಮಿಷನ್ ಮಾಡುತ್ತಿರುವ ಸಾಮಾಜಿಕ ಕಾರ್ಯಗಳ ಬಗ್ಗೆ ಕ್ರಿಕೆಟಿಗರು ಮೆಚ್ಚುಗೆ ವ್ಯಕ್ತಪಡಿಸಿದರು. 'ಒಂದು ಜಗತ್ತು ಒಂದು ಕುಟುಂಬ' ಕಲ್ಪನೆಯಡಿ ಕ್ರಿಕೆಟ್ ಪಂದ್ಯ ಆಯೋಜಿಸಿ, ಜಗತ್ತಿಗೆ ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮಾತನಾಡಿ, "ಸಾಮಾಜಿಕ ಸೇವಾ ಕಾರ್ಯದ ಉದ್ದೇಶದಿಂದ ಪಂದ್ಯ ಆಯೋಜಿಸಿರುವುದು ಖುಷಿಯಾಗಿದೆ. ಸದ್ಗುರು ಮಧುಸೂದನ್ ಸಾಯಿ ಅವರ ನೇತೃತ್ವದಲ್ಲಿ ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವುದು ಎಲ್ಲರಿಗೂ ಮಾದರಿಯಾಗಿದೆ. ನಾನು ಕ್ಯಾನ್ಸರ್ ಬಾಧಿಸಿದಾಗ ತುಂಬಾ ನೋವಿನಲ್ಲಿ ಒದ್ದಾಡಿದ್ದೆ. ನನಗೆ ನೋವಿನ ಬಗ್ಗೆ ಅರಿವಿದೆ. ಹೀಗಾಗಿ ತನ್ನದೇ ಆದ ಯುವಿಕಾನ್ ಟ್ರಸ್ಟ್ ಹೆಸರಿನಲ್ಲಿ ಬಡ ಜನರಿಗೆ ತನ್ನಿಂದಾದ ಸಹಾಯ ಮಾಡುತ್ತಿದ್ದೇನೆ" ಎಂದು ತಿಳಿಸಿದರು.
ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಮಕಾಯ್ ಎಂಟಿನಿ ಮಾತನಾಡುತ್ತಾ, "ಅಂತಾರಾಷ್ಟ್ರೀಯ ಮಟ್ಟದಲ್ಲಿ ದಕ್ಷಿಣ ಅಫ್ರಿಕಾ ಹಾಗು ಭಾರತದ ನಡುವೆ ಉತ್ತಮ ಸಂಬಂಧವಿದೆ. ಪಂದ್ಯದಲ್ಲಿ ಭಾಗಿಯಾಗುವಂತೆ ಕೇಳಿದಾಗ, ಒಳ್ಳೆಯ ಉದ್ದೇಶವನ್ನರಿತು ಸಂತೋಷದಿಂದ ಭಾಗಿಯಾದೆ. ಕ್ರೀಡೆ ಎಲ್ಲವನ್ನೂ ಒಗ್ಗೂಡಿಸುತ್ತದೆ. ಎಷ್ಟೋ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ ಒದಗಿಸುವುದು ಸುಲಭವಲ್ಲ" ಎಂದು ಅಭಿಪ್ರಾಯಪಟ್ಟರು.
"1990ರಿಂದಲೂ ಭಾರತಕ್ಕೆ ಬರುತ್ತಿದ್ದೇನೆ. ಆಗಿನ ಭಾರತಕ್ಕೂ ಈಗಿನ ಭಾರತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ವಿಮಾನ ನಿಲ್ದಾಣ, ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿಯಾಗಿರುವುದು ಸಂತೋಷ" ಎಂದು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಡ್ಯಾರಿ ಮೊರಿಸನ್ ನುಡಿದರು. ನಂತರ ಇಂಗ್ಲೆಂಡ್ ತಂಡದ ಆಲ್ಫೇರ್ ಪೀಟರ್‌ಸನ್ ಮಾತನಾಡಿದರು.
ಅಂದು ಕ್ರಿಕೆಟ್ ನೋಡುವಾಗ ವೆಂಕಿ ಎಂದರೆ ಬೆಂಕಿ ಕೈಗೆ ಬಾಲ್ ಎಂದು ಹೇಳುತ್ತಿದ್ದೆವು. ಈ ಟೂರ್ನಿಯಲ್ಲಿ ಆ ಬೆಂಕಿ ಬೌಲಿಂಗ್ ನೋಡಬಹುದೇ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ವೆಂಕಟೇಶ್ ಪ್ರಸಾದ್, "ನಿಜವಾದ ಬೆಂಕಿ ನಾನಲ್ಲ ಯುವಿ. ಆರು ಬಾಲ್ಗೆ ಆರು ಸಿಕ್ಸರ್ ಹೊಡೆದಿದ್ದಾರೆ. ಆ ಬೆಂಕಿ ಈಗ ಆರಿ ಹೋಗಿದೆ" ಎಂದು ಹಾಸ್ಯಚಟಾಕಿ ಹಾರಿಸಿದರು.
ಇದನ್ನೂ ಓದಿ:ಆಲ್ರೌಂಡರ್ ದೀಪ್ತಿ ಶರ್ಮಗೆ ಐಸಿಸಿ ಮಾಸಿಕ ಕ್ರಿಕೆಟರ್ ಪ್ರಶಸ್ತಿ