ಬೆಂಗಳೂರು: ಕೊರೊನಾ 2ನೇ ಅಲೆಯ ತೀವ್ರತೆ ದಿನೇದಿನೆ ಹೆಚ್ಚುತ್ತಿದೆ. ಒಂದೆಡೆ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ, ಇನ್ನೊಂದೆಡೆ ಸೋಂಕಿನಿಂದ ಸಾವಿಗೀಡಾದವರನ್ನ ಸುಡಲು ಜಾಗ ಸಿಗುತ್ತಿಲ್ಲ.
ಇತ್ತ ಸೋಂಕಿತರನ್ನ ಸುಡಲು ಒಂದೆಡೆ ಸಿಬ್ಬಂದಿ ಹೆದರುತ್ತಿದ್ದರೆ, ಮತ್ತೊಂದೆಡೆ ದೇಹ ಸುಟ್ಟ ಹೊಗೆ ಸುತ್ತಮುತ್ತಲಿನ ನಿವಾಸಿಗಳಿಗೆ ತೊಂದರೆ ಉಂಟು ಮಾಡುತ್ತಿದೆ.
ಹಾಗಾಗಿ, ನಗರದ ಹರಿಶ್ಚಂದ್ರ ಘಾಟ್ ಚಿತಾಗಾರದ ಮುಂದೆ ಸಾರ್ವಜನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಬರ್ನಿಂಗ್ ಮಾಡಿದಾಗ ಅದರ ಹೊಗೆ ಮನೆಗಳಿಗೆ ಹೋಗುತ್ತದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾದಿಂದ ಸತ್ತವರ ಮೃತದೇಹಗಳನ್ನ ಸುಡುವುದನ್ನ ನಿಲ್ಲಿಸಬೇಕು ಎಂದು ಸುತ್ತಮುತ್ತಲಿನ ನಿವಾಸಿಗಳು ಆಗ್ರಹಿಸಿದ್ದು, ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಪ್ರತಿಭಟನಾನಿರತರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಬಳಿಕ ಪೊಲೀಸರ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದಾರೆ.