ಕರ್ನಾಟಕ

karnataka

ETV Bharat / state

ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ಖಾತೆ ಸೃಷ್ಟಿ: ಪ್ರಕರಣ ದಾಖಲು - ಪ್ರಕರಣ ದಾಖಲು

Creation of fake WhatsApp account: ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ಖಾತೆ ಸೃಷ್ಟಿ ಮಾಡಿರುವ ಕುರಿತು ಬೆಂಗಳೂರಿನಲ್ಲಿರುವ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

fake WhatsApp account
ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ನಕಲಿ ವಾಟ್ಸ್​ಆ್ಯಪ್ ಖಾತೆ ಸೃಷ್ಟಿ: ಪ್ರಕರಣ ದಾಖಲು

By ETV Bharat Karnataka Team

Published : Dec 8, 2023, 11:29 AM IST

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ಪೊಲೀಸ್​ ಅಧಿಕಾರಿಗಳು ಹೆಸರಿನಲ್ಲಿ ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ.ಜಿಲ್ಲಾಧಿಕಾರಿಗಳ ಹೆಸರು ಬಳಸಿಕೊಂಡು ಹಣಕ್ಕೆ ಬೇಡಿಕೆ ಇಡುತ್ತಿರುವ ಪ್ರಕರಣಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎ. ದಯಾನಂದ್ ಅವರ ಫೋಟೋ ಬಳಸಿಕೊಡು ಅವರ ಹೆಸರಿನಲ್ಲಿ ವಾಟ್ಸ್​ಆ್ಯಪ್ ಖಾತೆ ತೆರೆದಿರುವ ಆರೋಪಿ ಇಲಾಖೆಯ ಹಲವು ಅಧಿಕಾರಿಗಳಿಗೆ ಹಣ ನೀಡುವಂತೆ ಸಂದೇಶ ಕಳುಹಿಸಿದ್ದಾನೆ.

ತುರ್ತು ಕಾರ್ಯಕ್ಕೆ ಹಣ ಬೇಕಿದೆ ತಕ್ಷಣ ಕಳುಹಿಸಿ ಎಂದು ಸಂದೇಶ ರವಾನಿಸಿರುವುದನ್ನ ಕಂಡ ಅಧಿಕಾರಿಗಳು, ಅನುಮಾನಗೊಂಡು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸದ್ಯ ಈ ಕುರಿತು ಕೇಂದ್ರ ವಿಭಾಗದ ಸೈಬರ್ ಕ್ರೈಂ ಠಾಣೆಗೆ ಕೆ.ಎ. ದಯಾನಂದ್ ದೂರು ನೀಡಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

ಹಿಂದಿನ ಪ್ರಕರಣಗಳು, ಶಿಕ್ಷಣ ಸಚಿವರ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ:ಶಿಕ್ಷಣ ಹಾಗೂ ಸಾಕ್ಷರತಾ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೆಸರಿನಲ್ಲಿ ಇತ್ತೀಚೆಗೆ ನಕಲಿ ಫೇಸ್​ಬುಕ್​ ಖಾತೆ ತೆರೆಯಲಾಗಿತ್ತು. ಈ ಕುರಿತಂತೆ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ರಾಜ್ಯ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಸಂಚಾಲಕ ಜೆ.ಡಿ. ಮಂಜುನಾಥ್ ಅವರು ಈ ಬಗ್ಗೆ ದೂರು ದಾಖಲಿಸಿದ್ದರು.

ಫೇಸ್​ಬುಕ್​ನಲ್ಲಿ "ಶ್ರೀ ಮಧು ಬಂಗಾರಪ್ಪ ಜೀ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವರು" ಎನ್ನುವ ಹೆಸರಿನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು. ಫೇಸ್​ಬುಕ್​ನ ಡಿಪಿಗೆ ಮಧು ಬಂಗಾರಪ್ಪ ಅವರ ಭಾವಚಿತ್ರ ಹಾಕಲಾಗಿತ್ತು.‌ ಈ ಫೇಸ್​ಬುಕ್​ನ ನಕಲಿ ಖಾತೆಗೆ 58 ಸಾವಿರ ಜನ ಫಾಲೋ ಮಾಡುತ್ತಿದ್ದರು. ಈ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿತ್ತು.

ರಾಜ್ಯಪಾರ ಹೆಸರಿನಲ್ಲಿ ನಕಲಿ ಖಾತೆ:ರಾಜ್ಯಪಾಲರ ಹೆಸರಿನಲ್ಲಿ ಸೈಬರ್​ ವಂಚಕರು ನಕಲಿ ಫೇಸ್​​ಬುಕ್​ ಖಾತೆ ಸೃಷ್ಟಿಮಾಡಿದ್ದ ಪ್ರಕರಣ ಇತ್ತೀಚೆಗೆ ನಡೆದಿತ್ತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​ ಅವರ ಭಾವಚಿತ್ರ, ಹೆಸರು ಬಳಸಿಕೊಂಡು ನಕಲಿ ಫೇಸ್‌ಬುಕ್ ಖಾತೆ ತೆರೆದಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು. ಈ ಕುರಿತು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ದೂರು ನೀಡಿದ್ದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ ಸೃಷ್ಟಿಸಿದ್ದ ಮೂವರು ಆರೋಪಿಗಳನ್ನು ಸೈಬರ್ ಕ್ರೈಮ್ ಪೊಲೀಸರು ಇತ್ತೇಚೆಗೆ ಬಂಧಿಸಿದ್ದರು. ವೆಂಕಟೇಶ್, ಧರಣೇಶ್ ಹಾಗೂ ಸಿದ್ದಾರ್ಥ್ ಬಂಧಿತ ಆರೋಪಿಗಳು. ಈ ಕುರಿತು ಕೆಪಿಸಿಸಿ ಕಾನೂನು ವಿಭಾಗದ ಕಾರ್ಯಕಾರಿ ಸಮಿತಿ ಸದಸ್ಯ ಶತಭಾಷ್ ಶಿವಣ್ಣ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಕೊಟ್ಟಿದ್ದರು.

ಇದನ್ನೂ ಓದಿ:ಸೈಬರ್ ವಂಚನೆ ಪ್ರಕರಣಗಳಲ್ಲಿ ಬೆಂಗಳೂರಿಗೆ ಅಗ್ರಸ್ಥಾನ: ಕಾರಣಗಳೇನು?

ABOUT THE AUTHOR

...view details