ಕರ್ನಾಟಕ

karnataka

ETV Bharat / state

ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿ: ದೂರು ದಾಖಲು

ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿ- ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ಅವಹೇಳನ - ಕೆಪಿಸಿಸಿ ಕಾನೂನು ಘಟಕದಿಂದ ಸೈಬರ್‌ ಠಾಣೆಗೆ ದೂರು

KPCC
ಕೆಪಿಸಿಸಿ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿ

By

Published : Feb 4, 2023, 10:33 AM IST

Updated : Feb 4, 2023, 11:06 AM IST

ಬೆಂಗಳೂರು:ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕಾಂಗ್ರೆಸ್ ವಿರುದ್ಧವೇ ಅವಹೇಳನಕಾರಿ ಬರಹಗಳನ್ನು ಬರೆದು ಪೋಸ್ಟ್ ಮಾಡಿರುವ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷದ ಹಸ್ತದ ಗುರುತನ್ನ ಬಳಸಿಕೊಂಡು ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಖಾತೆ ಸೃಷ್ಟಿಸಿ ಅದರಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರನ್ನು ಅವಹೇಳನ ಮಾಡಿ ಪೋಸ್ಟ್​​ಗಳನ್ನು ಹಾಕಿದ್ದಾರೆ. ನಕಲಿ ವೆಬ್ ಸೈಟ್​​ನಲ್ಲಿ ಕಾಂಗ್ರೆಸ್‌ ನಾಯಕರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿರುವ ಹಿನ್ನೆಲೆ ಕೆಪಿಸಿಸಿ ಕಾನೂನು ಘಟಕದಿಂದ ಸೈಬರ್‌ ಠಾಣೆಗೆ ದೂರು ನೀಡಲಾಗಿದೆ.

ಕಾಂಗ್ರೆಸ್ ವಿರುದ್ಧವೇ ಅವಹೇಳನಕಾರಿ ಪೋಸ್ಟ್​​:ಕೆಪಿಸಿಸಿ ಘಟಕದ ಸದಸ್ಯ ಶತಬೀಶ್‌ ಶಿವಣ್ಣ ದೂರು ಸಲ್ಲಿಸಿದ್ದಾರೆ. ದೂರಿನ ಅನ್ವಯ ಎಫ್ಐಆರ್ ದಾಖಲಿಸಿದ ಸೈಬರ್‌ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ರಾಷ್ಟ್ರೀಯ ಪಕ್ಷಗಳ ನಡುವೆ ಪರಸ್ಪರ ಸಾಮಾಜಿಕ ಜಾಲತಾಣದಲ್ಲಿ ಕಿತ್ತಾಟ ಸಹಜ. ಅದು ಸದ್ಯ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ನಡುವೆ ನಡೆಯುತ್ತಲೇ ಇದೆ. ಆದರೆ ಕಾಂಗ್ರೆಸ್ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಕಾಂಗ್ರೆಸ್ ವಿರುದ್ಧವೇ ಅವಹೇಳನಕಾರಿ ಪೋಸ್ಟ್​​ಗಳನ್ನು ಹಾಕಿರುವುದು ಸಾಕಷ್ಟು ಅಚ್ಚರಿ ಮೂಡಿಸಿದೆ.

ಬಿಜೆಪಿ ಕೃತ್ಯ ಎಂದ ಕಾಂಗ್ರೆಸ್​​: ಸಾಮಾಜಿಕ ಜಾಲತಾಣದಲ್ಲಿ ಖಾತೆಗಳನ್ನು ಹ್ಯಾಕ್ ಮಾಡಿ ಅದರಲ್ಲಿ ಅವಹೇಳನಕಾರಿ ಪೋಸ್ಟ್ ಮಾಡುವುದು ಸರ್ವೇಸಾಮಾನ್ಯ. ಆದರೆ ಹೊಸ ಖಾತೆ ಸೃಷ್ಟಿಸಿ ಈ ರೀತಿ ಕೃತ್ಯ ಎಸಗಿರುವುದು ಅಪರೂಪ. ಕಾಂಗ್ರೆಸ್ ನಾಯಕರು ಈ ಕೃತ್ಯವನ್ನು ಬಿಜೆಪಿ ಪಕ್ಷದ ನಾಯಕರ ಮೇಲೆ ಹೊರಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಇಂಥದ್ದೊಂದು ಕೃತ್ಯವನ್ನು ನಡೆಸಿರುವುದು ಸರಿಯಲ್ಲ ಎಂದು ಆರೋಪಿಸಿದ್ದಾರೆ.

ಇದೀಗ ಪೊಲೀಸರು ತನಿಖೆ ಆರಂಭಿಸಿದ್ದು ಖಾತೆ ಸೃಷ್ಟಿಸಿದವರು ಯಾರು ಹಾಗೂ ಅವಹೇಳನಕಾರಿ ಪೋಸ್ಟ್​​​ಗಳಿಂದಾಗಿ ಉಂಟಾಗಿರುವ ಹಾನಿಯ ಬಗ್ಗೆ ತನಿಖೆ ನಡೆಸಲಿದ್ದಾರೆ. ಇಂಥದ್ದೊಂದು ಖಾತೆ ಸೃಷ್ಟಿಸಿ ಪೋಸ್ಟ್ ಮಾಡಿದವರನ್ನು ವಶಕ್ಕೆ ಪಡೆದು ತನಿಖೆ ನಡೆಸುವ ಕಾರ್ಯವನ್ನು ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ವಿಧಾನಸಭೆ ಚುನಾವಣೆಗೆ ಸಿದ್ಧತೆ:ರಾಜ್ಯ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಸಿದ್ಧತೆ ಕೈಗೊಂಡಿದ್ದಾರೆ. ಅಧಿಕಾರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರಯತ್ನ ನಡೆಸಿದರೆ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಪ್ರಯತ್ನ ಮಾಡುತ್ತಿದೆ. ಈ ಎರಡು ರಾಷ್ಟ್ರೀಯ ಪಕ್ಷಗಳ ಗುದ್ದಾಟದ ನಡುವೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಸಹ ಸಮಬಲ ಹೋರಾಟ ನೀಡುವುದಾಗಿ ಹೇಳುತ್ತಿದೆ. ಆಮ್ ಆದ್ಮಿ ಪಕ್ಷ ಸಹ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದೆ. ಒಟ್ಟಾರೆ ಮತ ಬ್ಯಾಂಕುಗಳನ್ನು ಸೆಳೆಯುವ ಸಲುವಾಗಿ ಸಾಕಷ್ಟು ಪ್ರಯತ್ನಗಳು ನಡೆದಿದೆ.

ಹಲವು ಭರವಸೆ: ಆಡಳಿತ ಪಕ್ಷ ಬಿಜೆಪಿ ಸಾಕಷ್ಟು ಘೋಷಣೆಗಳನ್ನು ಮಾಡಿದೆ. ಇದೇ ತಿಂಗಳ 17ರಂದು ರಾಜ್ಯ ಬಜೆಟ್ ಮಂಡಿಸಿ ಅದರಲ್ಲಿ ಇನ್ನಷ್ಟು ಘೋಷಣೆಗಳನ್ನು ಮಾಡುವ ತಯಾರಿ ನಡೆಸಿದೆ. ಚುನಾವಣೆಗೆ ಒಂದೆರಡು ತಿಂಗಳು ಮುನ್ನ ಈ ಬಜೆಟ್ ಮಂಡನೆ ಆಗಲಿದ್ದು ಜನಸಾಮಾನ್ಯರಿಗೆ ಸಾಕಷ್ಟು ಹೊಸ ಕೊಡುಗೆಗಳನ್ನು ನಿರೀಕ್ಷಿಸಲಾಗುತ್ತಿದೆ. ಇನ್ನೊಂದೆಡೆ ವಿಧಾನಸಭೆ ಚುನಾವಣೆ ಗೆಲುವಿಗೆ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪ್ರಣಾಳಿಕೆಗೆ ಮುನ್ನವೇ ಹಲವು ಭರವಸೆಗಳನ್ನು ನೀಡುತ್ತಿದೆ. ತಮ್ಮ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತೇವೆ. ಮಹಿಳಾ ಅವಲಂಬಿತ ಮನೆಗಳ ಗೃಹಿಣಿಯರಿಗೆ ಮಾಸಿಕ ಎರಡು ಸಾವಿರ ರೂ ಸಹಾಯಧನ ನೀಡುತ್ತೇವೆ ಎಂದು ಘೋಷಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಘೋಷಣೆಗಳು, ಕಾಂಗ್ರೆಸ್ ಪಕ್ಷದಿಂದ ಹೊರಬೀಳಲಿವೆ ಎನ್ನಲಾಗ್ತಿದೆ.

ಒಟ್ಟಾರೆ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಅಧಿಕಾರಕ್ಕೆ ಬರುವ ಸಿದ್ಧತೆ ಕೈಗೊಂಡಿರುವ ರಾಜಕೀಯ ಪಕ್ಷಗಳಿಗೆ ಪ್ರಚಾರಕ್ಕೆ ಸಾಮಾಜಿಕ ಜಾಲತಾಣ ಅತ್ಯಂತ ಉತ್ತಮ ವೇದಿಕೆಯಾಗಿದೆ. ಆದರೆ ಇದೀಗ ಇದರ ದುರ್ಬಳಕೆಯಾಗುತ್ತಿರುವುದು ವಿಪರ್ಯಾಸ. ತಮ್ಮ ಪಕ್ಷದ ಗುರುತು ಬಳಸಿ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ದೂರು ದಾಖಲಿಸಿರುವ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ಈ ವಿಚಾರದಲ್ಲಿ ಪೊಲೀಸರ ಮೇಲೆ ಇನ್ನಷ್ಟು ಒತ್ತಡ ಹೇರಲಿದೆ.

ಇದನ್ನೂ ಓದಿ:ಪ್ರತಿಷ್ಟಿತ ಆಸ್ಪತ್ರೆಗಳ ನಕಲಿ ವೆಬ್‌ಸೈಟ್ ಬಳಕೆ: ₹4 ಕೋಟಿ ನೀಡುವುದಾಗಿ ಜಾಹೀರಾತು ಹಾಕಿ ವಂಚನೆ

Last Updated : Feb 4, 2023, 11:06 AM IST

ABOUT THE AUTHOR

...view details