ಬೆಂಗಳೂರು: ಆರೋಪಿಗಳಿಗೆ ಜಾಮೀನು ಕೊಡಿಸಲು ಸರ್ಕಾರಿ ಕಚೇರಿಯ ಸೀಲ್ಗಳನ್ನು ನಕಲು ಮಾಡಿ ದಾಖಲಾತಿಗಳನ್ನು ಸೃಷ್ಟಿಸುತ್ತಿದ್ದ ಜಾಲವೊಂದನ್ನು ಬೆಂಗಳೂರು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಪತ್ತೆ ಹಚ್ಚಿ ಓರ್ವ ಮಹಿಳೆ ಸೇರಿದಂತೆ 9 ಜನರನ್ನು ಬಂಧಿಸಿದ್ದಾರೆ. ಪುಟ್ಟಸ್ವಾಮಿ, ನಸ್ರೀನ್ ,ರಾಜಣ್ಣ, ಮಂಜುನಾಥ್, ಆಂಜಿನಪ್ಪ, ಕುಮಾರ್, ಚಂದ್ರಗೌಡ, ಸೊಣ್ಣೆಗೌಡ ಮತ್ತು ಟಿ.ಎಂ.ರಾಜಪ್ಪ ಎಂಬುವವರೇ ಬಂಧಿತ ಆರೋಪಿಗಳು.
ಬೆಂಗಳೂರಲ್ಲಿ ಖತರ್ನಾಕ್ ಗ್ಯಾಂಗ್ ಪೊಲೀಸ್ ಬಲೆಗೆ ಸಿಟಿ ಮಾರ್ಕೆಟ್ ರಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಸಿಬ್ಬಂದಿ ಏ.19ರಂದು ರಾತ್ರಿ 10.30ರ ಸಮಯದಲ್ಲಿ ವಾಹನಗಳ ತಪಾಸಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಬಂದ ಆಟೋರಿಕ್ಷಾ ಪರಿಶೀಲಿಸಿದಾಗ ಅದರಲ್ಲಿದ್ದ ಇಬ್ಬರು ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತಕ್ಷಣ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ಅವರ ಬಳಿ ಇದ್ದ ಬ್ಯಾಗ್ ವಶಕ್ಕೆ ಪಡೆದಾಗ ಸರ್ಕಾರಿ ಕಚೇರಿಯ ಸೀಲುಗಳು ಹಾಗೂ ದಾಖಲೆಗಳು ಇರುವುದು ಕಂಡು ಬಂದಿದೆ.
ಅಂತೆಯೇ, ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ತಮ್ಮ ಸಂಗಡಿಗರೊಂದಿಗೆ ಸೇರಿ ತಾಲೂಕು ಕಚೇರಿ ಹತ್ತಿರ ಹೋಗಿ ಕೆಲವು ರೈತರ ಆರ್‌ಟಿಸಿ ಮತ್ತು ಮ್ಯುಟೇಷನ್ ಗಳನ್ನು ಪಡೆದು ಅದರಲ್ಲಿ ಹೆಸರಿಗೆ ತಕ್ಕಂತೆ ಕೆಲವು ವ್ಯಕ್ತಿಗಳ ಭಾವಚಿತ್ರಗಳನ್ನು ಬಳಸಿ ನಕಲಿ ಆಧಾರ್ ಕಾರ್ಡ್ ತಯಾರು ಮಾಡಿ ಜೈಲಿನಲ್ಲಿರುವ ಆರೋಪಿಗಳ ಪರವಾಗಿ ನ್ಯಾಯಾಲಯಕ್ಕೆ ವಕೀಲರ ಮೂಲಕ ಜಾಮೀನಿಗಾಗಿ ಹಾಜರುಪಡಿಸಿ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮೋಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ತಿಳಿಸಿದರು.
ಹಲವು ವಸ್ತುಗಳು ಪೊಲೀಸ್ ವಶಕ್ಕೆ:ಮಾರ್ಕೆಟ್ ಠಾಣೆ ಇನ್ಸ್ಪೆಕ್ಟರ್ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ, ಅವರು ನೀಡಿದ ಮಾಹಿತಿ ಮೇರೆಗೆ ತಲೆಮರೆಸಿಕೊಂಡಿದ್ದ ಉಳಿದ ಏಳು ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ನಕಲಿ ಸೀಲ್ಗಳು, ನಕಲಿ ಆಧಾರ್ ಕಾರ್ಡ್, ನಕಲಿ ಪ್ರಮಾಣಪತ್ರ, ನಕಲಿ ಎಕ್ಸೀರಿಯನ್ಸ್ ಲೆಟರ್ಗಳು, ನಕಲಿ ಪಹಣಿ ಪತ್ರಗಳು, ಕಂಪ್ಯೂಟರ್, ಪ್ರಿಂಟರ್, ಸ್ಕ್ಯಾನರ್, ಲ್ಯಾಮಿನೇಷನ್ ಮಷಿನ್ ಮತ್ತು ಆಟೋರಿಕ್ಷ ವಶಕ್ಕೆ ಪಡೆಯಲಾಗಿದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಒನ್ ಕೇಂದ್ರದಿಂದ ಪಹಣಿ ಪಡೆದು ಎಡಿಟ್!:ಆರೋಪಿಗಳು ಬೆಂಗಳೂರು ಒನ್ ಕೇಂದ್ರದಲ್ಲಿ ಪಹಣಿ ಪಡೆದು ಅದನ್ನು ಎಡಿಟ್ ಮಾಡಿಕೊಳ್ಳುತ್ತಿದ್ದರು. ಕ್ಯೂಆರ್ ಕೋಡ್ ಮೂಲಕ ಮೂಲ ಮಾಲೀಕರ ಹೆಸರು ತೆಗೆದು ಜಾಮೀನು ನೀಡುವ ವ್ಯಕ್ತಿಯ ಹೆಸರನ್ನು ಮುದ್ರಿಸುತ್ತಿದ್ದರು. ಆಧಾರ್ ಕಾರ್ಡ್‌ಗಳನ್ನು ಸಹ ನಕಲು ಮಾಡಿ ಆರೋಪಿಗಳ ಜಾಮೀನಿಗೆ ಸಹಕರಿಸುತ್ತಿದ್ದುದು ವಿಚಾರಣೆಯಿಂದ ಬಯಲಿಗೆ ಬಂದಿದೆ.
ಒಬ್ಬ ವ್ಯಕ್ತಿಯ ಜಾಮೀನಿಗಾಗಿ 20-30 ಸಾವಿರ ರೂ. ಪಡೆದು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಈ ಗ್ಯಾಂಗ್ ಕೆಲವೊಂದು ಸರ್ಕಾರಿ ಕಚೇರಿಯ ಸೀಲ್ಗಳನ್ನೂ ನಕಲು ಮಾಡಿಕೊಂಡಿದ್ದರು. ಗ್ರಾಮ ಲೆಕ್ಕಿಗರ ನಕಲಿ ಸಹಿ ಹಾಗೂ ಸೀಲ್ ಸಹ ಮಾಡಿಸಿಕೊಂಡು ನ್ಯಾಯಾಲಯಕ್ಕೆ ದಾಖಲೆ ರೂಪದಲ್ಲಿ ಸಲ್ಲಿಸುತ್ತಿದ್ದರು. ಇದೇ ಮೂಲಕವೇ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದರು. ಆರೋಪಿಗಳ ಹೇಳಿಕೆ ಮೇರೆಗೆ ಗ್ರಾಫಿಕ್ ಸೆಂಟರ್ ಮೇಲೆ ಕೂಡ ದಾಳಿ ನಡೆಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆ ಕೈಕೊಳ್ಳಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಇದನ್ನೂ ಓದಿ:ವಿಡಿಯೋ: ನಿಂಬೆಗೂ ಬಂತು ಬಂಗಾರದ ಬೆಲೆ; 50 ಕೆಜಿ ಕದ್ದು ಪರಾರಿಯಾದ ಕಳ್ಳ