ಬೆಂಗಳೂರು: ನಗರದ ಸಂಚಾರದಟ್ಟಣೆ ನಿಯಂತ್ರಿಸುವ ಸಲುವಾಗಿ ಸರ್ಕಾರ ನಗರದಲ್ಲಿ ಮೇಲ್ಸೇತುವೆ ರಸ್ತೆಗಳ ಪುನರ್ ನಿರ್ಮಾಣ ಕಾರ್ಯವನ್ನು ಕೈಗೊಂಡಿದ್ದು, ಪ್ರಸ್ತುತ ಕೆಲ ಮೇಲ್ಸೇತುವೆ ರಸ್ತೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಹಲವೆಡೆ ಮೇಲುಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಇನ್ನೂ ಹಲವೆಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ, ಈ ಸ್ಥಳಗಳಲ್ಲಿ ಜನರಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ. ಕೆಲ ಮೇಲುರಸ್ತೆಗಳ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನ ಮೇಲು ರಸ್ತೆಗಳ ಮೇಲೆ, ಅಕ್ಕ ಪಕ್ಕ ನೋಡಿಕೊಂಡು ಸಂಚರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳಪೆ ಗುಣಮಟ್ಟದ ಕಾಮಗಾರಿ ಮಾಡಲಾಗಿದೆ ಎನ್ನುವ ಆರೋಪಗಳೂ ಕೇಳೀಬರುತ್ತಿದೆ.
ರಾಜಾಜಿನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಹೊಸದಾಗಿ ನಿರ್ಮಿಸಲಾದ ಎರಡು ಮೇಲುರಸ್ತೆಗಳ ಪಿಲ್ಲರ್‌ಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಈ ಬಿರುಕುಗಳನ್ನು ಮುಚ್ಚಿದ್ದರೂ ಕೂಡ ಈಗಲೋ ಆಗಲೋ ಎನ್ನುವಂತಿರುವ ಅದರ ಅವಸ್ಥೆಯನ್ನು ಕಂಡು ಜನ ಭಯದಿಂದ ಓಡಾಡುತ್ತಿದ್ದಾರೆ.
ಯಾವುದೇ ಕ್ರಮ ಕೈಗೊಳ್ಳದ ಪಾಲಿಕೆ:ಪಾಲಿಕೆ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಸಾರ್ವಜನಿಕರು ದೂರು ಸಲ್ಲಿಸಿದ್ದರೂ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದು, ಎರಡು ಮೇಲುರಸ್ತೆಗಳ ವಾಹನ ದಟ್ಟಣೆ ಸರಾಗಗೊಳಿಸುವ ಸಲುವಾಗಿ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ಮೇಲುರಸ್ತೆ ನಿರ್ಮಾಣ ಮಾಡಲಾಗಿದೆ. ಪಾಲಿಕೆ ಯೋಜನೆಯ 1 ಮತ್ತು 2 ಹಂತಗಳನ್ನು ಪೂರ್ಣಗೊಳಿಸಿದೆ. ಹಂತ 3 ಮಾರ್ಚ್ 31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
2019 ರಲ್ಲಿ ಪೂರ್ಣ ಗೊಂಡ ಸೇತುವೆಯಲ್ಲಿ ಬಿರುಕು:ಸಿಟಿ ಹಾಸ್ಪಿಟಲ್ ಮತ್ತು ಬೆಸ್ಕಾಂ ಪವರ್ ಹೌಸ್ ನಡುವಿನ ಮೇಲ್ಸೇತುವೆ 2019 ರಲ್ಲಿ ಪೂರ್ಣಗೊಂಡಿದ್ದು, ಎರಡನೆಯದು ಬೆಸ್ಕಾಂ ಪವರ್ ಹೌಸ್ ಮತ್ತು ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಡುವೆ 2021 ರಲ್ಲಿ ಸಿದ್ಧವಾಗಿದೆ. ಈ ಎರಡು ಮೇಲುರಸ್ತೆಗಳು 500 ಮೀ ಉದ್ದವಿವೆ. ನ್ಯಾಷನಲ್ ಪಬ್ಲಿಕ್ ಸ್ಕೂಲ್ ಮತ್ತು ವಿಜಯನಗರ ಟೋಲ್ ಗೇಟ್ ನಡುವೆ ಮೂರನೇ ಮೇಲ್ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.