ಬೆಂಗಳೂರು:ನಗರದಲ್ಲಿ ಪಟಾಕಿ ಅನಾಹುತ ಪ್ರಕರಣಗಳು ಹೆಚ್ಚಾಗುತ್ತಿವೆ. ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಶನಿವಾರ ಒಂದೇ ಪ್ರಕರಣ ವರದಿಯಾಗಿತ್ತು, ಆದರೆ, ನಿನ್ನೆ(ಭಾನುವಾರ) ಪಟಾಕಿ ಸಿಡಿತಕ್ಕೊಳಗಾದವರ ಸಂಖ್ಯೆ 20ಕ್ಕೆ ಏರಿಕೆ ಆಗಿದೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಪಟಾಕಿ ಸಿಡಿತ ಕೇಸ್ ಹೆಚ್ಚಳ ನಿನ್ನೆ ಬರೋಬ್ಬರಿ 6 ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದು, ನಗರದಲ್ಲಿ ಅನಾಹುತದ ಸಂಖ್ಯೆ 20ಕ್ಕೆ ಏರಿಕೆ ಆಗಿದೆ. ಮಿಂಟೋ, ನಾರಾಯಣ ನೇತ್ರಾಲಯ, ಮೋದಿ ಕಣ್ಣಿನ ಆಸ್ಪತ್ರೆ, ನೇತ್ರಧಾಮ ಸೇರಿದಂತೆ ಹಲವು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. 7 ಮಂದಿಗೆ ಗಂಭೀರಗಾಯ ಹಾಗೂ 13 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಒಬ್ಬರಿಗೆ ಪ್ಲಾಸ್ಟಿಕ್ ಸರ್ಜರಿ ಸಹ ಮಾಡಲಾಗಿದೆ.
ಮಿಂಟೋ ಆಸ್ಪತ್ರೆಯಲ್ಲಿ ನಿನ್ನೆ ಸಂಪಿಗೆ ಹಳ್ಳಿ ಲೇಔಟ್ ನ 13 ವರ್ಷದ ಬಾಲಕನಿಗೆ ಬಿಜಿಲಿ ಪಟಾಕಿಯಿಂದ ಕಣ್ಣಿಗೆ ಹಾನಿಯಾಗಿದೆ. ಮಾಗಡಿ ರೋಡ್ ನಲ್ಲಿ 4 ವರ್ಷದ ಬಾಲಕನಿಗೆ ಗಾಯವಾಗಿದ್ದು ಈತನೂ ಬಿಜಿಲಿ ಪಟಾಕಿ ಬಳಸಿದ್ದ ಎಂದು ತಿಳಿದು ಬಂದಿದೆ.
ಸುಂಕದಕಟ್ಟೆಯ 11 ವರ್ಷದ ಬಾಲಕ ಬಿಜಿಲಿ ಪಟಾಕಿ ಹೊಡೆಯಲು ಹೋಗಿ ಗಾಯಗೊಂಡಿದ್ದಾನೆ. 10 ವರ್ಷದ ಬಾಲಕನಿಗೆ ಫ್ಲವರ್ ಪಾಟ್ ಪಟಾಕಿ ಹೊಡೆಯಲು ಹೋಗಿ ಹಾನಿಯಾಗಿದ್ದು, ಮತ್ತೊಂದು ಕಡೆ ರಸ್ತೆಯಲ್ಲಿ ಹೋಗುವಾಗ ರಾಕೆಟ್ ಪಟಾಕಿಯಿಂದ 17 ವರ್ಷದ ಹುಡುಗನಿಗೆ ಹಾನಿಯಾಗಿರುವುದು ತಿಳಿದು ಬಂದಿದೆ.
ಇನ್ನು 12 ವರ್ಷದ ಬಾಲಕಿಯೊಬ್ಬಳು ಫ್ಲವರ್ ಪಾಟ್ ಪಟಾಕಿ ಹೊಡೆಯಲು ಹೋಗಿ ಹಾನಿ ಮಾಡಿಕೊಂಡಿದ್ದಾಳೆ. ಒಟ್ಟಾರೆ 14ನೇ ತಾರೀಖಿನಂದು ಒಂದು ಪ್ರಕರಣ, 15ನೇ ತಾರೀಖಿನಂದು 7 ಪಟಾಕಿ ಪ್ರಕರಣಗಳು ಕಂಡು ಬಂದಿದೆ. ಚಿಕಿತ್ಸೆಗೆ ಬರುತ್ತಿರುವ ಪ್ರತಿಯೊಬ್ಬರಿಗೂ ಕೋವಿಡ್ ಪರೀಕ್ಷೆ ಮಾಡಲಾಗಿದೆ.