ಬೆಂಗಳೂರು:ಬಿಜೆಪಿ ಸರ್ಕಾರ ಕಳೆದ ಎರಡು ದಿನಗಳ ಹಿಂದೆ, ಸಿ.ಪಿ. ಯೋಗೇಶ್ವರ್, ಹೆಚ್ ವಿಶ್ವನಾಥ್, ಭಾರತಿ ಶೆಟ್ಟಿ, ಸಾಯಿ ಬಣ್ಣ ತಳವಾರ ಹಾಗೂ ಶಾತರಾಂ ಸಿದ್ದಿ ಸೇರಿದಂತೆ ಐವರನ್ನು ವಿಧಾನಪರಿಷತ್ಗೆ ನಾಮನಿರ್ದೇಶನ ಮಾಡಿದೆ. ಈ ಐವರ ಆಯ್ಕೆ ಒಂದು ರೀತಿ ಅಚ್ಚರಿ ಎಂದರೂ ಸರಿಯೇ.
ಏಕಂದ್ರೆ ಬೆರಳೆಣಿಕೆಯಷ್ಟು ಪುಸ್ತಕ ಬರೆದಿರುವ ಹೆಚ್. ವಿಶ್ವನಾಥ್ ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ಗೆ ಎಂಟ್ರಿ ಕೊಟ್ಟರೆ, ಸಮಾಜ ಸೇವೆ ಕೋಟಾದಡಿ ಭಾರತಿ ಶೆಟ್ಟಿ, ಶಿಕ್ಷಣ ಕ್ಷೇತ್ರದಿಂದ ಸಾಯಿಬಣ್ಣ ತಳವಾರ ಹಾಗೂ ಎಲೆಮರೆ ಕಾಯಿಯಂತಿದ್ದ ಶಾಂತರಾಂ ಸಿದ್ದಿ ಬುಡಕಟ್ಟು ಕೋಟಾದಿಂದ ವಿಧಾನ ಪರಿಷತ್ಗೆ ಎಂಟ್ರಿ ಕೊಟ್ಟಿದ್ದಾರೆ. ಇವೆಲ್ಲದರ ನಡುವೆ ಅಚ್ಚರಿ ಎಂದರೆ ಮಾಜಿ ಸಚಿವ ಸಿ.ಪಿ . ಯೋಗೇಶ್ವರ್ ಅವರ ಆಯ್ಕೆ.
ಸಿನಿಮಾ ನಟರಾಗಿ ವೃತ್ತಿ ಜೀವನಾರಂಭಿಸಿ ರಾಜಕೀಯ ಅಖಾಡಕ್ಕೆ ಇಳಿದಿದ್ದ ಈ"ಸೈನಿಕ" ರಾಜಕೀಯಕ್ಕೆ ಬಂದ ಮೇಲೆ ಚಿತ್ರರಂಗದಿಂದ ಕೊಂಚ ದೂರವೇ ಉಳಿದು ಸಂಪೂರ್ಣವಾಗಿ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಡಿ ಕೆ ಸಹೋದರರ ಮೇಲೆ ಗುಡುಗುತ್ತಲೇ ಇದ್ದ ಸಿ.ಪಿ. ಯೋಗೇಶ್ವರ್ ಸತತವಾಗಿ ಎರಡು ಸೋಲುಗಳ ರುಚಿಯನ್ನು ಕಂಡಿದ್ದರು. ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಉರುಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಯೋಗೇಶ್ವರ್ಗೆ ಕೊನೆಗೂ ಮುಖ್ಯಮಂತ್ರಿಗಳ ಕೃಪಾಕಟಾಕ್ಷ ಸಿಕ್ಕಿದೆ. ಎಲ್ಲಾ ದಾರಿ ಬಂದ್ ಆಗಿದ್ರು, ನೀರಲ್ಲಿ ಮುಳುಗುವವನಿಗೆ ಸಣ್ಣ ಕಡ್ಡಿ ಜೀವದಾನ ಮಾಡಿತು ಎಂಬ ಮಾತಿನಂತೆ ಉಳಿದ ಒಂದೇ ಒಂದು ದಾರಿಯಾದ ಸಿನಿಮಾ ಕೋಟಾದಲ್ಲಿ ಯೋಗೇಶ್ವರ್ ಅವರನ್ನು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೆ ವಿಧಾನಸೌಧದ ಮೆಟ್ಟಿಲು ತುಳಿಸಿದ್ದಾರೆ.
ಇದರಿಂದ ಈ ಬಾರಿ ಸಿನಿಮಾ ಕೋಟದಿಂದ ವಿಧಾನಪರಿಷತ್ ಸದಸ್ಯರಾಗುವ ಕನಸು ಕಾಣ್ತಿದ್ದ, ಮಾಜಿ ಶಾಸಕ ನಟ ಜಗ್ಗೇಶ್, ಹಿರಿಯ ನಟಿ ಶೃತಿ, ಮಾಳವಿಕ ಅವಿನಾಶ್ಗೆ ಯೋಗೇಶ್ವರ್ ನಿರಾಸೆ ಮೂಡಿಸಿದ್ದಾರೆ. ಕಾಂಗ್ರೆಸ್ನಿಂದ ಬಿಜೆಪಿಗೆ ಜಂಪ್ ಆಗಿದ್ದ ಜಗ್ಗೇಶ್ ಒಂದು ಬಾರಿ ಕೆಎಸ್ಅರ್ಟಿಸಿ ಉಪಾಧ್ಯಕ್ಷ ಮಾಡಿದ್ದು, ಬಿಟ್ಟರೆ ಇದುವರೆಗೂ ಹೇಳಿಕೊಳ್ಳುವಂತಹ ಯಾವುದೇ ಸ್ಥಾನಮಾನ ಬಿಜೆಪಿಯಲ್ಲಿ ಸಿಕ್ಕಿರಲಿಲ್ಲ. ಅದರೆ ಈ ಬಾರಿ ಸಿನಿಮಾ ಕೋಟಾದಡಿ ಮತ್ತೆ ವಿಧಾನಸೌಧದ ಮೆಟ್ಟಿಲು ಹತ್ತುವ ಕನಸು ಕಾಣ್ತಿದ್ದ ನವರಸ ನಾಯಕನ ಕನಸಿಗೆ ಸೈನಿಕ ಯೋಗೇಶ್ವರ್ ತಣ್ಣೀರು ಎರಚಿದ್ದಾರೆ.
ಅಲ್ಲದೆ ಈ ಬಾರಿ ಸಿನಿಮಾ ಕೋಟಾದಲ್ಲಿ ಎಂಎಲ್ಸಿ ಆಗುವ ಭರವಸೆ ಇಟ್ಟುಕೊಂಡಿದ್ದ ಶೃತಿ ಹಾಗೂ ಮಾಳವಿಕ ಅವಿನಾಶ್ ಅವರ ಆಸೆಗೂ ಯೋಗೇಶ್ವರ್ ಆಯ್ಕೆ ತಣ್ಣೀರು ಎರಚಿದಂತಾಗಿದೆ. ಎಲ್ಲರ ಲೆಕ್ಕಾಚಾರ ತಲೆಕೆಳಗೆ ಮಾಡಿ ಎಂಎಲ್ ಸಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅರಂಭದಲ್ಲಿ ಸಿನಿಮಾ ಕೋಟಾದಡಿ ಯೋಗೇಶ್ವರ್ ಆಯ್ಕೆಗೆ ಬಿಜೆಪಿಯಲ್ಲಿ ಅಸಮಾಧಾನ ಕಂಡು ಬಂದ್ರು, ಇದಕ್ಕೆ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ ರಚನೆಗೆ ಸಹಕಾರ ನೀಡಿದ್ದ ಯೋಗೇಶ್ವರ್ ಅವರನ್ನ ವಿಧಾನಪರಿಷತ್ ಗೆ ಕಳುಹಿಸಿದ್ದಾರೆ.