ವೇಗ ಪಡೆಯದ ಗೋ ಶಾಲೆಗಳ ನಿರ್ಮಾಣ ಕಾಮಗಾರಿ.. ಈವರೆಗೆ ಕೇವಲ 6 ಗೋ ಶಾಲೆ ಕಾರ್ಯಾರಂಭ!
ಹಸುಗಳ ರಕ್ಷಣೆಗಾಗಿ ರಾಜ್ಯದಲ್ಲಿ 'ಗೋ ಹತ್ಯೆ ನಿಷೇಧ ಕಾಯ್ದೆ' ಜಾರಿಗೆ ತರಲಾಗಿದೆ. ಕಾಯ್ದೆ ಪ್ರಕಾರ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು. ಕಾಯ್ದೆ ಜಾರಿಯಾಗಿ ಒಂದು ಮುಕ್ಕಾಲು ವರ್ಷ ಕಳೆದಿದ್ದು, ಈವರೆಗೆ ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಗೋ ಶಾಲೆಗಳು ಕಾರ್ಯಾರಂಭವಾಗಿವೆ. ಗೋಶಾಲೆ ನಿರ್ಮಾಣದ ಸ್ಥಿತಿಗತಿ ಹೇಗಿದೆ ಎಂಬ ಸಮಗ್ರ ವರದಿ ಇಲ್ಲಿದೆ.
ಗೋಶಾಲೆ ನಿರ್ಮಾಣ ಕಾಮಗಾರಿ ವಿಳಂಬ
By
Published : Oct 10, 2022, 9:22 AM IST
ಬೆಂಗಳೂರು:ಬಿಜೆಪಿ ಸರ್ಕಾರ ಗೋವುಗಳ ರಕ್ಷಣೆಗಾಗಿ ವಿಶೇಷ ಕಾಳಜಿಯೊಂದಿಗೆ 'ಗೋ ಹತ್ಯೆ ನಿಷೇಧ ಕಾಯ್ದೆ'ಯನ್ನು 2021 ಫೆಬ್ರವರಿಯಿಂದ ಜಾರಿಗೆ ತಂದಿದೆ. ಆದರೆ ಕಾಯ್ದೆ ಬಂದು ಒಂದು ಮುಕ್ಕಾಲು ವರ್ಷ ಕಳೆದಿದ್ದು, ಗೋವುಗಳ ರಕ್ಷಣೆಗಾಗಿ ಸರ್ಕಾರಿ ಗೋ ಶಾಲೆಗಳ ನಿರ್ಮಾಣ ಕಾರ್ಯ ಮಾತ್ರ ತೆವಳುತ್ತ ಸಾಗುತ್ತಿದೆ. ಕೇವಲ 6 ಜಿಲ್ಲೆಗಳಲ್ಲಿ ಮಾತ್ರ ಗೋ ಶಾಲೆಗಳು ಕಾರ್ಯಾರಂಭವಾಗಿವೆ. ಉಳಿದಂತೆ 24 ಜಿಲ್ಲೆಗಳ ಗೋಶಾಲೆ ನಿರ್ಮಾಣ ಕಾಮಗಾರಿ ಇನ್ನೂ ಪ್ರಗತಿ ಹಂತದಲ್ಲೇ ಇದೆ.
ಆಮೆಗತಿಯಲ್ಲಿ ಸರ್ಕಾರಿ ಗೋ ಶಾಲೆಗಳ ನಿರ್ಮಾಣ:ಗೋ ಹತ್ಯೆ ನಿಷೇಧ ಕಾಯ್ದೆಯನ್ನೇನೋ ಬಿಜೆಪಿ ಸರ್ಕಾರ ಅತೀ ಉತ್ಸಾಹದಿಂದ ಜಾರಿಗೆ ತಂದಿತು. ಆದರೆ ರಕ್ಷಿಸಿದ ಹಸುಗಳ ಆಶ್ರಯಕ್ಕಾಗಿ ಸರ್ಕಾರಿ ಗೋ ಶಾಲೆಗಳನ್ನು ಸ್ಥಾಪಿಸುವಲ್ಲಿ ಇರಬೇಕಾದ ಆಸಕ್ತಿಯನ್ನು ತೋರುತ್ತಿಲ್ಲವೇ ಎಂಬ ಪ್ರಶ್ನೆ ಮೂಡಿದೆ.
2021-22 ಸಾಲಿನಲ್ಲಿ 31 ಸರ್ಕಾರಿ ಗೋ ಶಾಲೆಗಳನ್ನು ನಿರ್ಮಿಸುವುದಾಗಿ ಘೋಷಿಸಲಾಗಿತ್ತು. ಈಗಾಗಲೇ ಸರ್ಕಾರಿ ಗೋ ಶಾಲೆ ನಿರ್ಮಾಣಕ್ಕೆ ಸರ್ಕಾರ ಈವರೆಗೆ 30 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಪೈಕಿ 11.87 ಕೋಟಿ ರೂ. ಅನುದಾನ ಖರ್ಚು ಮಾಡಲಾಗಿದೆ.
2022-23 ನೇ ಸಾಲಿನ ಆಯವ್ಯಯದಲ್ಲಿ ಗೋಶಾಲೆಗಳನ್ನು 100ಕ್ಕೆ ಹೆಚ್ಚಿಸಲಾಗುದು ಎಂದು ಘೋಷಿಸಲಾಗಿತ್ತು. ಅದರಂತೆ ಪ್ರತಿ ಜಿಲ್ಲೆಗಳಲ್ಲಿ 70 ಹೆಚ್ಚುವರಿ ಗೋ ಶಾಲೆಗಳನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಈ ಪೈಕಿ ವಿವಿಧ ಜಿಲ್ಲೆಗಳಲ್ಲಿ 12 ಗೋ ಶಾಲೆಗಳಿಗೆ ಜಮೀನು ಮಂಜೂರು ಮಾಡಲಾಗಿದೆ. 40 ಗೋ ಶಾಲೆಗಳಿಗಾಗಿ ಜಮೀನು ಗುರುತಿಸಲಾಗಿದೆ. 18 ಗೋ ಶಾಲೆಗಳಿಗೆ ಇನ್ನೂ ಜಮೀನನ್ನು ಗುರುತಿಸಲಾಗಿಲ್ಲ.