ಬೆಂಗಳೂರು:ಕೋವಿಡ್-19 ಹಲವರ ಬದುಕು ಕಿತ್ತುಕೊಂಡಿದೆ. ದುಡಿಯುವ ಅನೇಕ ಜೀವ ಡೆಡ್ಲಿ ವೈರಸ್ಗೆ ಬಲಿಯಾಗುತ್ತಿರುವ ಕಾರಣ ಅವರನ್ನೇ ಅವಲಂಬಿತರಾಗಿ ಜೀವನ ನಡೆಸ್ತಿದ್ದವರ ಬಾಳು ಅನಾಥವಾಗಿದೆ. ಕೋವಿಡ್ನಿಂದ ಸಾವನ್ನಪ್ಪಿರುವ ಕುಟುಂಬಕ್ಕೆ ಇದೀಗ ರಾಜ್ಯ ಸರ್ಕಾರ ನೆರವಿನ ಹಸ್ತ ಚಾಚಲು ಚಿಂತನೆ ನಡೆಸುತ್ತಿದೆ.
ಮಹಾಮಾರಿಯಿಂದ ರಾಜ್ಯದಲ್ಲಿ ಇಲ್ಲಿಯವರೆಗೆ 28 ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಹೀಗಾಗಿ ಅನೇಕ ಕುಟುಂಬಗಳು ತೊಂದರೆಗೊಳಗಾಗಿವೆ.ಈಗಾಗಲೇ ಅನಾಥ ಮಕ್ಕಳ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಾಲ ಸೇವಾ ಯೋಜನೆ ಜಾರಿಗೆ ತಂದಿದೆ. ಅನಾಥ ಮಕ್ಕಳಿಗೆ ಮಾಸಿಕ 3,500 ರೂ, ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆ. ಅದೇ ರೀತಿ ಕೋವಿಡ್ನಿಂದ ಕುಟುಂಬದ ಏಕೈಕ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡಿರುವ ಅವಲಂಬಿತರಿಗೂ ಆರ್ಥಿಕ ನೆರವು ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ.
ಮೃತರ ಅವಲಂಬಿತರಿಗೆ ಸಹಾಯ ಹಸ್ತದ ಚಿಂತನೆ:ಕೊರೊನಾ ಮಹಾಮಾರಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೋವಿಡ್ ಸಾವಿಗೆ ಪರಿಹಾರ ನೀಡಬೇಕಾಗುತ್ತದೆ. ಕೊರೊನಾಗೆ ಬಲಿಯಾದವರ ಅವಲಂಬಿತರಿಗೆ ಪರಿಹಾರ ಘೋಷಣೆ ಮಾಡುವ ಸಂಬಂಧ ಈಗಾಗಲೇ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ವಿಚಾರಣೆಯಲ್ಲಿದ್ದು, ಕೇಂದ್ರ ಸರ್ಕಾರದಿಂದ ವಿವರಣೆ ಕೋರಿದೆ. ಇತ್ತ ಈಗಾಗಲೇ ದೆಹಲಿ ಹಾಗೂ ಮಧ್ಯ ಪ್ರದೇಶ ಸರ್ಕಾರ ಕೋವಿಡ್ ಮೃತರ ಕುಟುಂಬಕ್ಕೆ ಎಕ್ಸ್ ಗ್ರೇಷಿಯಾ ಪರಿಹಾರ ಘೋಷಣೆ ಮಾಡಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲೂ ಪರಿಹಾರ ಧನ ನೀಡುವ ಬಗ್ಗೆ ಸಾಧಕ ಬಾಧಕ ಸಂಬಂಧ ಪರಿಶೀಲನೆ ನಡೆಸುವಂತೆ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.