ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಕೊಳಗೇರಿಗಳು ಮತ್ತು ಬಡವರು ವಾಸಿಸುವ ಪ್ರದೇಶಗಳಿಗೆ ವ್ಯಾಕ್ಸಿನ್ ತಲುಪಿಸಲು ಹೆಚ್ಚಿನ ಗಮನ ನೀಡಬೇಕು. ಈ ಕುರಿತು ವರದಿ ಸಲ್ಲಿಸಿ ಎಂದು ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.
ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಕೋರಿ ಸಲ್ಲಿಸಿರುವ ಪಿಐಎಲ್ಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ. ಕೊಳಗೇರಿಗಳು, ಕಟ್ಟಡ ಕಾರ್ಮಿಕರು ಹಾಗೂ ಹೆಚ್ಚಿನ ಸಂಖ್ಯೆಯ ಬಡವರು ಒಂದೆಡೆ ವಾಸಿಸುವ ಸ್ಥಳಗಳಿಗೂ ಲಸಿಕೆ ತಲುಪಿಸಬೇಕು. ಈ ಸಮುದಾಯದ ಬಗ್ಗೆ ಹೆಚ್ಚಿನ ಕಾಳಜಿ ಹಾಗೂ ಎಚ್ಚರಿಕೆ ವಹಿಸಬೇಕೆಂದು ಕೋರ್ಟ್ ಹೇಳಿತ್ತು. ಈ ಸಂಬಂಧ ಕೈಗೊಂಡ ಕ್ರಮಗಳ ಬಗ್ಗೆ ಮಾ.31ಕ್ಕೆ ವಿವರವಾದ ವರದಿ ನೀಡಬೇಕು ಎಂದು ಸೂಚಿಸಿದೆ.
ಓದಿ:ಬಿಬಿಎಂಪಿ ಶಾಲಾ ಮಕ್ಕಳಿಗೂ ಕೊರೊನಾ ಕಾಟ: 14 ವಿದ್ಯಾರ್ಥಿಗಳಿಗೆ ಪಾಸಿಟಿವ್
ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಲಸಿಕೆ ಶ್ರೀಮಂತರಿಗೆ ಲಭ್ಯವಾದರೆ ಸಾಲದು. ಬಡವರಿಗೆ ಅದರಲ್ಲೂ ವಿಶೇಷವಾಗಿ ಕೊಳಗೇರಿಗಳಲ್ಲಿ ವಾಸಿಸುತ್ತಿರುವವರಿಗೆ ತಲುಪಿಸಬೇಕು. ಅವರಿಗೆ ಲಸಿಕೆ ದೊರಕದಿದ್ದರೆ ಅದು ಸಂವಿಧಾನದ ವಿಧಿ 21ರಡಿ ಲಭ್ಯವಿರುವ ಆರೋಗ್ಯ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ. ಕಾರ್ಮಿಕರು ಒಂದೆಡೆಯಿಂದ ಮತ್ತೊಂದೆಡೆಗೆ ವಲಸೆ ಹೋಗುತ್ತಿದ್ದಾರೆ. ಆ ವೇಳೆ ಸೋಂಕು ಇದ್ದರೆ, ಅದು ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಿಸುತ್ತದೆ ಎಂದಿದೆ.
ಕೊರೊನಾ ನೆಪ: ವಿಚಾರಣೆ ವೇಳೆ ನ್ಯಾ. ಅರವಿಂದ್ ಕುಮಾರ್, ಒಂದು ವರ್ಷವಾದರೂ ಕೊರೊನಾ ಸಂಬಂಧಿತ ಕೇಸ್ಗಳು ಮುಗಿಯುತ್ತಿಲ್ಲ. ಕೊರೊನಾ ಕೂಡ ಅಡ್ವೊಕೇಟ್ ಫ್ರೆಂಡ್ಲಿ ಆಗಿದೆ ಎಂದು ಲಘು ಹಾಸ್ಯ ಮಾಡಿದರು. ಇದಕ್ಕೆ ಧ್ವನಿಗೂಡಿಸಿದ ಮುಖ್ಯ ನ್ಯಾಯಮೂರ್ತಿ ಓಕ, ಸರ್ಕಾರಿ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಸಮರ್ಥನೆ ನೀಡಲು ಒಳ್ಳೆಯ ಕಾರಣ ಸಿಕ್ಕಿದಂತಾಗಿದೆ. ಎಲ್ಲ ಅರ್ಜಿಗಳಲ್ಲೂ, ಎಲ್ಲ ವಿಳಂಬಕ್ಕೂ ಕೋವಿಡನ್ನೇ ಕಾರಣವಾಗಿ ನೀಡುತ್ತಿದ್ದಾರೆ ಎಂದರು.