ಬೆಂಗಳೂರು: ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡಲು 'ಲಸಿಕೆ ವಾಹನ'ಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೇರ್ ಇಂಡಿಯಾ ಸಹಯೋಗದಲ್ಲಿ 80 ಲಸಿಕಾ ದ್ವಿಚಕ್ರ ವಾಹನ ಹಾಗೂ 16 ಮೊಬೈಲ್ (ನಾಲ್ಕು ಚಕ್ರ ವಾಹನ) 'ಲಸಿಕೆ ವಾಹನ' ಗಳಿಗೆ ಚಾಲನೆ ನೀಡಲಾಯಿತು.
ಪ್ರತಿ ವಲಯಕ್ಕೆ 8 ದ್ವಿಚಕ್ರ ವಾಹನಗಳು ಹಾಗೂ 2 ಮೊಬೈಲ್(ನಾಲ್ಕು ಚಕ್ರ ವಾಹನ) ಸೇರಿದಂತೆ ಒಟ್ಟು 80 ದ್ವಿಚಕ್ರ ವಾಹನ ಹಾಗೂ 16 ಮೊಬೈಲ್(ನಾಲ್ಕು ಚಕ್ರ ವಾಹನ) ವಾಹನಗಳು ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲು ಹೋಗುವ ಆರೋಗ್ಯ ಸಿಬ್ಬಂದಿಯ ಜೊತೆ ಕಾರ್ಯನಿರ್ವಹಿಸಲಿದ್ದಾರೆ.
ನಗರದಲ್ಲಿ ಇದುವರೆಗೆ ಒಟ್ಟು 1,36,99,018 ಡೋಸ್ ಲಸಿಕೆ ನೀಡಲಾಗಿದ್ದು, 80,57,563 ಮೊದಲ ಡೋಸ್(ಶೇ. 88 ರಷ್ಟು), 56,41,455 ಎರಡನೇ ಡೋಸ್(ಶೇ. 62 ರಷ್ಟು) ಲಸಿಕೆಯನ್ನು ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೆಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಯಲಹಂಕದ ಡಾ. ಬಿ.ಆರ್.ಅಂಬೇಡ್ಕರ್ ಭವನ ಹಾಗೂ ಮಲ್ಲೇಶ್ವರದ ಯಂಗ್‌ಸ್ಟರ್ಸ್ ಕಬಡ್ಡಿ ಆಟದ ಮೈದಾನದಲ್ಲಿ ಸ್ಥಾಪಿಸಿರುವ ಬೃಹತ್ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದ್ದು, ವಾಕ್ ಇನ್ ಹಾಗೂ ಡ್ರೈವ್ ಇನ್ ಮೂಲಕ ವಾಹನಗಳಲ್ಲೇ ಲಸಿಕೆ ಪಡೆಯುವ ವ್ಯವಸ್ಥೆ ಮಾಡಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾಕರಣ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಬ್ಲಾಕ್ ಮತ್ತು ಲೇನ್ ಮಟ್ಟದಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದಲ್ಲಿ ಮೊದಲನೇ ಡೋಸ್ ಲಸಿಕೆ ಪಡೆದು ಎರಡನೇ ಡೋಸ್ ಲಸಿಕೆ ಪಡೆಯದಿರುವವರ ಪಟ್ಟಿಯನ್ನು ಕೋವಿನ್ ಪೋರ್ಟಲ್ನಿಂದ ಪಡೆದುಕೊಂಡಿದ್ದು, ಎರಡನೇ ಡೋಸ್ ಲಸಿಕೆ ಪಡೆಯದವರಿಗೆ ದೂರವಾಣಿ ಮೂಲಕ ಕರೆ ಮಾಡಿ ಎರಡನೇ ಡೋಸ್ ಲಸಿಕೆ ಪಡೆಯಲು ತಿಳಿಸಲಾಗುತ್ತಿದೆ.