ಬೆಂಗಳೂರು: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಲಾಕ್ ಡೌನ್ ತೆರವಾಗಿದ್ದು, ರಾಜ್ಯಾದ್ಯಂತ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ಅನ್ಲಾಕ್ 3.O ಜಾರಿಯಾಗಿದೆ. ವ್ಯಾಪಾರ ವಹಿವಾಟು, ರೈಲು, ಬಸ್ ಸಂಚಾರ, ಮಠ, ಮಂದಿರಗಳು ಸೇರಿದಂತೆ ಬಹುತೇಕ ಎಲ್ಲ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.
ಲಾಕ್ಡೌನ್ನಲ್ಲಿ ಸಂಚಾರ ವ್ಯವಸ್ಥೆ ನಿಂತು ಹೋಗಿದ್ದರಿಂದ ಒಂದೆಡೆಯಿಂದ ಇನ್ನೊಂದೆಡೆಗೆ ತೆರಳುವುದು ಕಷ್ಟ ಸಾಧ್ಯವಾಗಿತ್ತು. ಕೇವಲ ರೈಲು ಸಂಚಾರ ಮಾತ್ರ ಇತ್ತು. ಆದರೆ, ರಾಜ್ಯದ ಎಲ್ಲಾ ಮೂಲೆಗಳನ್ನು ರೈಲು ತಲುಪದ ಕಾರಣ ಸಮಸ್ಯೆ ಉಂಟಾಗಿತ್ತು. ಇದೀಗ ಲಾಕ್ ಡೌನ್ ತೆರವಾಗಿದ್ದು, ಪ್ರಮುಖ ಸಂಚಾರ ವ್ಯವಸ್ಥೆಯಾದ ರಸ್ತೆ ಸಂಚಾರ ಆರಂಭವಾಗಿದೆ. ರಾಜ್ಯದ ಎಲ್ಲಾ ಮೂಲೆಗಳಿಗೂ ಬಸ್ ತೆರಳುತ್ತಿವೆ. ಈ ಹಿನ್ನೆಲೆ, ನಗರ ಪ್ರದೇಶದಿಂದ ಗ್ರಾಮೀಣ ಭಾಗಕ್ಕೆ ತೆರಳಿದ್ದ ಜನರು ಮತ್ತೆ ನಗರಗಳತ್ತ ಮುಖ ಮಾಡಿದ್ದಾರೆ.
ಕೃಷಿ ಚಟುವಟಿಕೆ ಬಿರುಸು, ಕಾರ್ಖಾನೆಗಳು ಓಪನ್
ಲಾಕ್ ಡೌನ್ ತೆರವಾದ ಹಿನ್ನೆಲೆ, ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ. ರೈತರು ಪಟ್ಟಣಗಳಿಗೆ ತೆರಳಿ ಬಿತ್ತನೆ ಬೀಜ,ಗೊಬ್ಬರ ಖರೀದಿಯಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ನಗರ ಪ್ರದೇಶಗಳಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಾಂಭ ಮಾಡುತ್ತಿವೆ.
ತಮ್ಮ ಕಾರ್ಯ ಚಟುವಟಿಕೆಗಳನ್ನು ಕಡಿಮೆಗೊಳಿಸಿದ್ದ ಕಂಪನಿಗಳು, ನಿಧಾನವಾಗಿ ಲಯ ಕಂಡುಕೊಳ್ಳುತ್ತಿವೆ. ಕಳೆದ ಒಂದುವರೆ ವರ್ಷದಲ್ಲಿ ಬಾರಿ ಸಂಖ್ಯೆಯಲ್ಲಿ ಜನ ಉದ್ಯೋಗ ಕಳೆದುಕೊಂಡಿದ್ದಾರೆ.
ಕೋವಿಡ್ ಹೊಡೆತಕ್ಕೆ ಉದ್ಯೋಗ ನಷ್ಟ :ಕೋವಿಡ್ ಎರಡನೇ ಅಲೆಯ ಸಂದರ್ಭ ಮಾತ್ರ ಸುಮಾರು 22.7 ಲಕ್ಷ ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂಬ ಮಾಹಿತಿಯಿದೆ. ಮೂಲಗಳ ಪ್ರಕಾರ, ದೇಶದ 43 ಮಿಲಿಯನ್ ಉದ್ಯೋಗಿಗಳ ಪೈಕಿ, 22.7 ಮಿಲಿಯನ್ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.