ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿದ್ದು, ಮತ್ತೆ ಮೊದಲಿನಂತೆ ಬೆಡ್ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕೋವಿಡ್ ಮೊದಲ ಅಲೆಯಲ್ಲೇ ರೋಗಿಗಳಿಗೆ ಸರಿಯಾದ ಸಮಯಕ್ಕೆ ಬೆಡ್ ಸಿಗದೇ ಪರದದಾಡಿದ್ದರು. ಈ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೆಪದಲ್ಲಿ ರೋಗಿಗಳ ಬಳಿ ಲಕ್ಷ ಲಕ್ಷ ವಸೂಲಿ ಮಾಡಿದ್ದು ಇದೆ. ಬಳಿಕ ಇದರಿಂದ ಎಚ್ಚೆತ್ತ ಸರ್ಕಾರ ಖಾಸಗಿ ಆಸ್ಪತ್ರೆಯ ಸುಲಿಗೆ ತಪ್ಪಿಸಲು ದರ ನಿಗದಿ ಮಾಡಿತ್ತು. ಇದೀಗ ಎರಡನೇ ಅಲೆಯಲ್ಲೂ ಇದೇ ಕ್ರಮ ಮುಂದುವರೆದಿದ್ದು, ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಪ್ರತ್ಯೇಕ ದರ ನಿಗದಿ ಮಾಡಲಾಗಿದೆ.
ಸರ್ಕಾರಿ ಆಸ್ಪತ್ರೆಯಿಂದ ಖಾಸಗಿ ಆಸ್ಪತ್ರೆಗೆ ರೆಫರ್ ಮಾಡಿದರೆ ಫ್ರೀ ಟ್ರೀಟ್ಮೆಂಟ್: ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ಪಡೆಯಲು ಕಟ್ಟುನಿಟ್ಟಾದ ನಿಯಮಗಳು ಜಾರಿಯಲ್ಲಿ ಇವೆ. ಸರ್ಕಾರಿ ನೋಡಲ್ ಅಧಿಕಾರಿ ಅಥವಾ ಜಿಲ್ಲಾ ಆರೋಗ್ಯ ಅಧಿಕಾರಿ ಶಿಫಾರಸು ಮಾಡಿದ್ರೆ ಮಾತ್ರ ಖಾಸಗಿ ಆಸ್ಪತ್ರೆಗೆ ತೆರಳಬಹುದು. ಈ ಮೊದಲು ರೋಗಿ ಬಯಸಿದರೆ ಅಷ್ಟೇ ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಮಾಡಬಹುದಿತ್ತು. ಆದರೆ, ಯಾವಾಗ ಜನರು ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ಗಳು ಇದ್ದರೂ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡಿದ್ದಾರೋ ಆಗ ಸರ್ಕಾರ ಮತ್ತೊಂದು ನಿಯಮ ಜಾರಿ ಮಾಡಿದೆ. ಸರ್ಕಾರಿ ಆಸ್ಪತ್ರೆಗಳ ಬೆಡ್ ಪೂರ್ತಿಯಾಗಿದ್ದರೆ ಹಾಗೂ ಅಧಿಕಾರಿಗಳು ಯಾವ ಆಸ್ಪತ್ರೆಗೆ ಶಿಫಾರಸು ಮಾಡ್ತಾರೋ ಅಲ್ಲೇ ಚಿಕಿತ್ಸೆ ಪಡೆಯಬೇಕು. ಹಾಗೇ ಶಿಫಾರಸು ಮೂಲಕ ಖಾಸಗಿ ಆಸ್ಪತ್ರೆಗೆ ಹೋದರೆ ಕೋವಿಡ್ ಚಿಕಿತ್ಸೆ ಉಚಿತವಾಗಿ ಸಿಗಲಿದೆ.
- ಶೇ. 50 ರಷ್ಟು ಮೀಸಲಿಟ್ಟ ಬೆಡ್ಗೆ ವಿಧಿಸುವ ದರ: ಈ ದರವನ್ನ ಸರ್ಕಾರವೇ ಸಂಪೂರ್ಣ ಭರಿಸಲಿದ್ದು ಅದರ ದರ ನಿಗದಿ ಪಟ್ಟಿ ಹೀಗಿದೆ.
- ಜನರಲ್ ವಾರ್ಡ್ - 5200 ರೂಪಾಯಿ, ಹೆಚ್ಡಿಯು ಬೆಡ್- 7000 ರೂಪಾಯಿ
- ಐಸೋಲೇಷನ್ ವಾರ್ಡ್- 8,500 ರೂಪಾಯಿ
- ಐಸೋಲೇಷನ್ ವಿತ್ ವೆಂಟಿಲೇಷನ್- 10,000
- ರೋಗಿಗಳು ನೇರವಾಗಿ ಖಾಸಗಿ ಆಸ್ಪತ್ರೆಗಳಿಗೆ ದಾಖಲಾದರೆ ದರಪಟ್ಟಿ ಹೀಗಿದೆ
- ಜನರಲ್ ವಾರ್ಡ್ - 10,000 ರೂಪಾಯಿ
- ಹೆಚ್ಡಿಯು ಬೆಡ್-12,000 ರೂಪಾಯಿ
- ಐಸೋಲೇಷನ್ ವಿತ್ ಔಟ್ ವೆಂಟಿಲೇಷನ್- 15,000 ರೂಪಾಯಿ
- ಐಸೋಲೇಷನ್ ವಿತ್ ವೆಂಟಿಲೇಷನ್- 25,000
ಎಚ್ಚೆತ್ತುಕೊಂಡ ಜನತೆ:ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಶುಲ್ಕ ಕಟ್ಟಲು ಆಗದೇ ಜನರೇ ಸ್ವತಃ ಸರ್ಕಾರಿ ಕೋಟಾದಡಿ ಹೋಗುತ್ತಿದ್ದು, ಸುಲಿಗೆ ಪ್ರಮಾಣ ಕಡಿಮೆ ಆಗಿದೆ. ಯಾಕೆಂದರೆ ಕೋವಿಡ್ ಚಿಕಿತ್ಸಾ ವಿವರಗಳನ್ನ ಆರೋಗ್ಯ ಇಲಾಖೆಗೆ ಅಪ್ಡೇಟ್ ಮಾಡಬೇಕಿರುವ ಕಾರಣಕ್ಕೆ ಸದ್ಯ ದುಬಾರಿ ಶುಲ್ಕ ಪ್ರಮಾಣ ಕಡಿಮೆ ಆಗಿದೆ. ಇದಕ್ಕಿಂತ ಹೆಚ್ಚಾಗಿ ಜನರೇ ಎಚ್ಚೆತ್ತುಕೊಂಡಿದ್ದು, ಖಾಸಗಿ ಆಸ್ಪತ್ರೆ ಬೆಡ್ ಹುಡುಕಿಕೊಂಡು ಹೋಗುವ ಪ್ರಸಂಗ ಕಡಿಮೆ ಆಗಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕಾರಣಕ್ಕೂ ಹೆಚ್ಚಿನ ಜನ ಖಾಸಗಿ ಆಸ್ಪತ್ರೆಯತ್ತ ಮುಖ ಮಾಡುತ್ತಿಲ್ಲ. ಇನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಎಂದಿನಂತೆ ಕೋವಿಡ್ ಸೋಂಕಿಗೆ ಉಚಿತ ಚಿಕಿತ್ಸೆ ಸಿಗಲಿದೆ. ಎರಡನೇ ಕೋವಿಡ್ ಹೊಡೆತ ಪರಿಣಾಮ ಬೆಡ್ ಸಿಗದ ಪರಿಸ್ಥಿತಿ ಉದ್ಭವವಾಗಿದ್ದು, ಸರ್ಕಾರಿಯೋ, ಖಾಸಗಿಯೋ ಯಾವುದಾದರೂ ಸರಿ ಎಂಬ ನಿರ್ಧಾರಕ್ಕೆ ಮುಂದಾಗಿದ್ದಾರೆ.