ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ 3 ದಿನಗಳಲ್ಲಿ ಕೋವಿಡ್​ ಲಸಿಕೆ ಪೂರೈಸಿ.. ಕೇಂದ್ರಕ್ಕೆ ಹೈಕೋರ್ಟ್ ತಾಕೀತು - ವ್ಯಾಕ್ಸಿನ್ ಕಳುಹಿಸಲು ಹೈಕೊರ್ಟ್ ತಾಕೀತು

ರಾಜ್ಯದಲ್ಲಿ 65 ಲಕ್ಷ ಜನರಿಗೆ 2ನೇ ಬಾರಿ ಲಸಿಕೆ ನೀಡಬೇಕಿದ್ದು, ಸರ್ಕಾರದ ಬಳಿ ಕೇವಲ 7 ಲಕ್ಷ ಡೋಸ್ ಮಾತ್ರ ಲಭ್ಯವಿವೆ ಎಂಬ ಹೇಳಿಕೆಗೆ ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯ ಸರ್ಕಾರ ಇಂದೇ ಅಗತ್ಯ ಪ್ರಮಾಣದ ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಈ ಮನವಿಯನ್ನು ಕೇಂದ್ರ ಸರ್ಕಾರ 3 ದಿನಗಳ ಒಳಗೆ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದೆ.

Highcourt
Highcourt

By

Published : May 6, 2021, 6:03 PM IST

ಬೆಂಗಳೂರು :ಕೋವಿಡ್ ನಿಯಂತ್ರಣಕ್ಕೆ ನೀಡಲಾಗುತ್ತಿದ್ದ ವ್ಯಾಕ್ಸಿನ್ ಕೊರತೆಯಿಂದಾಗಿ 2ನೇ ಡೋಸ್ ನೀಡಲು ಸಮಸ್ಯೆ ಎದುರಾಗಿರುವ ವಿಚಾರಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿರುವ ಹೈಕೋರ್ಟ್, ರಾಜ್ಯಕ್ಕೆ ಅಗತ್ಯವಿರುವಷ್ಟು ಲಸಿಕೆ ನೀಡಲು ಕೇಂದ್ರ ಸರ್ಕಾರ 3 ದಿನಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ತಾಕೀತು ಮಾಡಿದೆ.

ರಾಜ್ಯದಲ್ಲಿ 65 ಲಕ್ಷ ಜನರಿಗೆ 2ನೇ ಬಾರಿ ಲಸಿಕೆ ನೀಡಬೇಕಿದ್ದು, ಸರ್ಕಾರದ ಬಳಿ ಕೇವಲ 7 ಲಕ್ಷ ಡೋಸ್ ಮಾತ್ರ ಲಭ್ಯವಿವೆ ಎಂಬ ಹೇಳಿಕೆಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯ, ರಾಜ್ಯ ಸರ್ಕಾರ ಇಂದೇ ಅಗತ್ಯ ಪ್ರಮಾಣದ ಲಸಿಕೆ ಪೂರೈಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು. ಈ ಮನವಿಯನ್ನು ಕೇಂದ್ರ ಸರ್ಕಾರವು 3 ದಿನಗಳ ಒಳಗೆ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿದೆ.

ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯದಲ್ಲಿ ಮೊದಲನೇ ಸುತ್ತಿನಲ್ಲಿ 65.83 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಇದೀಗ 2ನೇ ಡೋಸ್ ನೀಡಬೇಕಿದೆ. ಆದರೆ, ಸರ್ಕಾರದ ಬಳಿ ಕೇವಲ 7.76 ಲಕ್ಷ ಡೋಸ್ ಮಾತ್ರ ಲಭ್ಯವಿದೆ. ಕೋವಿಡ್ ವಾರಿಯರ್ಸ್ ಆಗಿ ಕೆಲಸ ಮಾಡುತ್ತಿರುವವರಿಗೂ ಲಸಿಕೆ ನೀಡಬೇಕಿದೆ. ಹೀಗಾಗಿ ರಾಜ್ಯಕ್ಕೆ ಶೀಘ್ರವಾಗಿ ಲಸಿಕೆ ಪೂರೈಕೆಯಾಗಬೇಕಿದೆ ಎಂದು ತಿಳಿಸಿದರು.

ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಪೀಠ, ರಾಜ್ಯ ಸರ್ಕಾರ ಇಂದೇ ಎಷ್ಟು ಪ್ರಮಾಣದ ಲಸಿಕೆ ಬೇಕೆಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು. ಕೇಂದ್ರ ಸರ್ಕಾರ ಸಂದಿಗ್ಧ ಪರಿಸ್ಥಿತಿಯನ್ನು ಪರಿಗಣಿಸಿ ಲಸಿಕೆ ಉತ್ಪಾದಕರೊಂದಿಗೆ ಸಮಾಲೋಚನೆ ನಡೆಸಬೇಕು. ಮುಂದಿನ 3 ದಿನಗಳಲ್ಲಿ ಲಸಿಕೆ ಪೂರೈಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶಿಸಿತು. ಅಲ್ಲದೇ, ಲಸಿಕೆ ಪಡೆಯಲು ಕೋವಿನ್ ಆ್ಯಪ್ ನಲ್ಲಿ ನೋಂದಣಿ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಜನರು ನೋಂದಣಿ ಮಾಡಿಕೊಳ್ಳಲು ರಾಜ್ಯ ಸರ್ಕಾರ ನೆರವು ನೀಡುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.

ABOUT THE AUTHOR

...view details