ಬೆಂಗಳೂರು :ಆರ್. ಆರ್ ನಗರದಲ್ಲಿ ಶಾಂತಿಯುತವಾಗಿ ಮತದಾನ ಮುಗಿದಿದ್ದು, ನಿನ್ನೆ ರಾತ್ರಿ 678 ಮತ ಯಂತ್ರಗಳನ್ನ ಸ್ಥಳಾಂತರ ಮಾಡಲಾಯಿತು. ಇಂದು ಬೆಳಗ್ಗೆ ಪಕ್ಷಗಳ ಏಜೆಂಟರ ಸಮ್ಮುಖದಲ್ಲಿ ಸೀಲ್ ಹಾಕಲಾಗಿದೆ ಎಂದು ಜಿಲ್ಲಾ ಚುನಾವಣಾ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದರು.
ಮತಯಂತ್ರಗಳು ಇಟ್ಟಿರುವ ಸ್ಟ್ರಾಂಗ್ ರೂಂಗಳಿಗೆ ಕೇಂದ್ರ ಅರೆಸೇನಾ ಪಡೆ ಮೂಲಕ ಮೂರು ಹಂತದ ಭದ್ರತೆ ನೀಡಲಾಗಿದೆ. ನವೆಂಬರ್ ಹತ್ತರಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಕಳೆದ ಒಂದು ತಿಂಗಳಿನಿಂದ ನಡೆದ ಚುನಾವಣೆ ಪ್ರಕ್ರಿಯೆ ವೇಳೆ ಕೋವಿಡ್ ನಿಯಮ ಪಾಲನೆಯಾಗಿಲ್ಲ. ಹೀಗಾಗಿ, ತಜ್ಞರ ಸಲಹೆ ಮೇರೆಗೆ ಆರ್.ಆರ್ ನಗರ ವಿಧಾಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎರಡು ಹಂತಗಳಲ್ಲಿ ವ್ಯಾಪಕ ಕೋವಿಡ್ ಪರೀಕ್ಷೆ ನಡೆಯಲಿದೆ. ನ.6 ರಿಂದ 9 ರವರೆಗೆ ಮೊದಲ ಹಂತದ ಪರೀಕ್ಷೆ ಹಾಗೂ ನ.11 ರಿಂದ 14 ರವರೆಗೆ ಎರಡನೆ ಹಂತದ ಪರೀಕ್ಷೆ ನಡೆಯಲಿದೆ.