ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಕೊರೊನಾ ಸ್ಫೋಟ; ನಿತ್ಯ 50,000 ಪರೀಕ್ಷಾ ಸಾಮರ್ಥ್ಯದ ಹೊಸ ಟಾರ್ಗೆಟ್ ಫಿಕ್ಸ್! - ಪರೀಕ್ಷಾ ಸಾಮರ್ಥ್ಯವನ್ನು ದ್ವಿಗುಣ

ದಿನೇ ದಿನೇ ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಶಂಕಿತರ ಪರೀಕ್ಷೆ ಹೊಸ ಸವಾಲೊಡ್ಡಿದೆ. ಹಾಗಾಗಿ ಪರೀಕ್ಷಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿಕೊಳ್ಳಲು ನಿರ್ಧರಿಸಲಾಗಿದ್ದು, ದಿನಕ್ಕೆ 50 ಸಾವಿರ ಪರೀಕ್ಷೆ ನಡೆಸುವ ಹೊಸ ಗುರಿಯನ್ನು ಹಾಕಿಕೊಂಡಿದೆ. ಈ ಕುರಿತ ಎಕ್ಸ್ ಕ್ಲ್ಯೂಸಿವ್ ಡಿಟೈಲ್ಸ್ ಇಲ್ಲಿದೆ.

ಕೊರೊನಾ
ಕೊರೊನಾ

By

Published : Jul 7, 2020, 10:22 PM IST

ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಶಂಕಿತರ ಪರೀಕ್ಷೆ ಸವಾಲಾಗಿದೆ. ಹೀಗಾಗಿ, ಪರೀಕ್ಷಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿಕೊಳ್ಳಲು ನಿರ್ಧರಿಸಲಾಗಿದ್ದು, ನಿತ್ಯ 50,000 ಪರೀಕ್ಷೆ ನಡೆಸುವ ಗುರಿಯನ್ನು ಹಾಕಿಕೊಂಡಿದೆ.

ರಾಜ್ಯದಲ್ಲಿ ಕೊರೊನಾ ಪ್ರಥಮ ಸೋಂಕು ಪತ್ತೆಯಾದಾಗ ಬೆಂಗಳೂರಿನ ರಾಜೀವ್ ಗಾಂಧಿ ಎದೆರೋಗ ಸಂಶೋಧನಾ ಕೇಂದ್ರ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮಾತ್ರವೇ ಕೊರೊನಾ ಪರೀಕ್ಷಾ ಕೇಂದ್ರ ಇದ್ದವು. ಆದರೆ 2 ಲ್ಯಾಬ್​ಗಳಿಂದ ಆರಂಭಗೊಂಡ ಪರೀಕ್ಷಾ ಕೇಂದ್ರಗಳನ್ನು ಹಂತ ಹಂತವಾಗಿ ವಿಸ್ತರಿಸಿಕೊಂಡು ಬರಲಾಯಿತು. ಇಂದು 44 ಸರ್ಕಾರಿ ಹಾಗೂ 36 ಖಾಸಗಿ ಆಸ್ಪತ್ರೆ ಸೇರಿ ಒಟ್ಟು 80 ಪರೀಕ್ಷಾ ಕೇಂದ್ರಗಳಿವೆ.

ಟಾರ್ಗೆಟ್ 10 ಸಾವಿರ ಎನ್ನುವ ಗುರಿ ಹಾಕಿಕೊಂಡಿದ್ದ ರಾಜ್ಯ ಸರ್ಕಾರ ಕಾಲಮಿತಿಗೂ ಮೊದಲೇ ಗುರಿ ತಲುಪಿದೆ. ನಂತರ ಕೆಲವೇ ದಿನಗಳಲ್ಲಿ ಪರೀಕ್ಷಾ ಸಾಮರ್ಥ್ಯದ ಸಂಖ್ಯೆಯನ್ನು 15 ಸಾವಿರಕ್ಕೆ ಹೆಚ್ಚಿಸಿಕೊಂಡು ನಂತರ 20 ಸಾವಿರಕ್ಕೆ ಸಾಮರ್ಥ್ಯವನ್ನು ವಿಸ್ತರಣೆ ಮಾಡಿಕೊಂಡಿತು. ಸದ್ಯ ಮಿತಿಯನ್ನು 25 ಸಾವಿರಕ್ಕೆ‌ ಹೆಚ್ಚಿಸಿಕೊಂಡಿದ್ದರೂ ಲ್ಯಾಬ್​ಗಳ ಮೇಲಿನ ಒತ್ತಡದ ಕಾರಣದಿಂದ 20 ಸಾವಿರದ ಮಿತಿಯ ಒಳಗಡೆಯೇ ನಿತ್ಯ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಈವರೆಗೆ ರಾಜ್ಯದಲ್ಲಿ ಒಟ್ಟು 7,40,047 ಕೊರೊನಾ ಪರೀಕ್ಷೆ ನಡೆಸಿದ್ದು, ಅದರಲ್ಲಿ 26,815 ಪಾಸಿಟಿವ್ ವರದಿಗಳು ಬಂದಿವೆ.

ಆದರೆ ದಿನೇ ದಿನೇ ಶಂಕಿತರ ಸಂಖ್ಯೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಕಂಡುಬರುತ್ತಿದೆ. ಸಮುದಾಯಕ್ಕೆ‌ ಹಬ್ಬಿರುವ ಅನುಮಾನ ವ್ಯಕ್ತವಾಗುತ್ತಿದೆ. ಇದರ ಜೊತೆಯಲ್ಲಿ ಕೇಂದ್ರದ ತಂಡ ಕೂಡ ರಾಜ್ಯದ ಎಲ್ಲಾ ಕಂಟೈನ್​ಮೆಂಟ್ ಜೋನ್​ಗಳಲ್ಲಿನ ಜನರಿಗೆ ಕೊರೊನಾ ತಪಾಸಣೆ ಮಾಡುವಂತೆ ಸೂಚನೆ ನೀಡಿದೆ. ಇದರಿಂದ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಈಗಿನ ಸಾಮರ್ಥ್ಯವನ್ನು ದುಪ್ಪಟ್ಟು ಮಾಡಿಕೊಳ್ಳಲೇಬೇಕಾದ ಇಕ್ಕಟ್ಟಿಗೆ ಸಿಲುಕಿದೆ.

ಸದ್ಯ ಇರುವ 80 ಲ್ಯಾಬ್​ಗಳಿಂದ ಈಗ ಬರುತ್ತಿರುವ ಕೋವಿಡ್-19 ಮಾದರಿಗಳ ಪರೀಕ್ಷೆಗೆ ಸಾಕಷ್ಟು ಸಮಯ ತಗುಲುತ್ತಿದೆ. ವರದಿ ಬರಲು ನಾಲ್ಕು ದಿನದ ಸರಾಸರಿ ತೆಗೆದುಕೊಳ್ಳಲಾಗುತ್ತಿದೆ. ಪ್ರತಿ ದಿನ 1,500-2,000 ಸಂಖ್ಯೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ, ಅವರ ಪ್ರಾಥಮಿಕ ಸಂಪರ್ಕಿತರ ಪರೀಕ್ಷೆ, ಕೊರೊನಾ ವಾರಿಯರ್ಸ್​ಗಳ ಕೊರೊನಾ ಪರೀಕ್ಷೆ ಹಿನ್ನೆಲೆ ಸಂಖ್ಯೆಯ ಪ್ರಮಾಣ ಹೆಚ್ಚಾಗುತ್ತಲೇ ಇದೆ. ಇದರಿಂದ ಈಗ‌ ಇರುವ ಲ್ಯಾಬ್​ಗಳಿಂದ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬರುತ್ತಿರುವ ಸ್ಯಾಂಪಲ್​ಗಳಿಗೂ ನಡೆಯುತ್ತಿರುವ ಪರೀಕ್ಷೆ ನಡುವೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿದೆ. ಇದರಿಂದ ಕೊರೊನಾ ಸೋಂಕಿತರು ಗುಣಮುಖರಾದರೂ ಆಸ್ಪತ್ರೆಯಿಂದ ಬಿಡುಗಡೆ ವಿಳಂಬವಾಗುತ್ತಿದೆ. ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಗೂ ಕೊರೊನಾ ವರದಿ ತಡವಾಗಿ ಬರುತ್ತಿರುವುದು ಹೊಸ ತಲೆನೋವಾಗಿ ಪರಿಣಮಿಸಿದೆ.

80 ಲ್ಯಾಬ್​ಗಳಲ್ಲಿ ಬೆಂಗಳೂರಿನ ಅಪೋಲೋ‌ ಆಸ್ಪತ್ರೆ, ಇನ್​ಸ್ಟೆಮ್ ಆಸ್ಪತ್ರೆ ಮತ್ತು ಮಣಿಪಾಲ್​ನ ಕಸ್ತೂರಿಬಾ ಮೆಡಿಕಲ್ ಕಾಲೇಜಿನ ಲ್ಯಾಬ್​ಗಳಲ್ಲಿ ಕಳೆದ 24 ಗಂಟೆಯಿಂದ ಪರೀಕ್ಷೆ ನಡೆದಿಲ್ಲ. ಲ್ಯಾಬ್​ಗಳು‌ ಸ್ಥಗಿತಗೊಂಡಿವೆ. ಉಳಿದ 77 ಲ್ಯಾಬ್​ಗಳಲ್ಲಿ ಹಲವು ಲ್ಯಾಬ್​ಗಳು ಕನಿಷ್ಠ ಪರೀಕ್ಷೆ ಮತ್ತೆ ಕೆಲ ಗರಿಷ್ಠ ಪ್ರಮಾಣದ ಪರೀಕ್ಷೆ ನಡೆಸುತ್ತಿದೆ‌.

ಈಗ ಇರುವ ಲ್ಯಾಬ್​ಗಳಿಂದಲೇ ಪ್ರತಿ ದಿನ 25 ಸಾವಿರ ಕೊರೊನಾ ಪರೀಕ್ಷಾ ಸಾಮರ್ಥ್ಯ ರಾಜ್ಯಕ್ಕೆ ಇದ್ದು, ಜುಲೈ 3ರಂದು 18,307 ಕೊರೊನಾ ಪರೀಕ್ಷೆ ನಡೆಸಿರುವುದು ಈವರೆಗಿನ ಗರಿಷ್ಠ ಪ್ರಮಾಣದ ಪರೀಕ್ಷೆಯಾಗಿದೆ. ಕಳೆದ ಒಂದು ವಾರದಿಂದ 15-18 ಸಾವಿರ ಪ್ರಮಾಣದಲ್ಲಿ ಕೊರೊನಾ ತಪಾಸಣೆ ನಡೆಸಲಾಗುತ್ತಿದೆ.

ಸದ್ಯ ಮತ್ತೆ ಹೊಸ ಲ್ಯಾಬ್​ಗಳ ಸ್ಥಾಪನೆ ಬದಲು ಇರುವ ಲ್ಯಾಬ್​ಗಳನ್ನೇ ಮೇಲ್ದರ್ಜೆಗೇರಿಸಿ ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ರಾಜ್ಯ ಸರ್ಕಾರ ನಿರ್ಧಾರಿಸಿದೆ. ಕೊರೊನಾ ಆರಂಭದಲ್ಲಿ ಟಾರ್ಗೆಟ್ 10 ಸಾವಿರ ಪರೀಕ್ಷಾ ಸಾಮರ್ಥ್ಯ ಗುರಿ ಇಟ್ಟುಕೊಂಡಂತೆ ಇದು ಹೊಸದಾದ ಮತ್ತೊಂದು ಗುರಿ ಇರಿಸಿಕೊಂಡಿದೆ. ಅದು ಟಾರ್ಗೆಟ್ 50 ಸಾವಿರ ಪರೀಕ್ಷಾ ಸಾಮರ್ಥ್ಯ ಹೊಂದುವ ಗುರಿ. ಈ ಗುರಿ ಬಹಳ ಕಠಿಣ ಸವಾಲಾಗಿದೆ. ಹೊಸ ಲ್ಯಾಬ್ ಆರಂಭಿಸದೇ ಇರುವ ಲ್ಯಾಬ್​ಗಳಿಂದಲೇ ಈ ಗುರಿ ಮುಟ್ಟಬೇಕಿದೆ. ಹೀಗಾಗಿ ಎಲ್ಲಾ ಲ್ಯಾಬ್​ಗಳಿಗೂ ಹೊಸದಾಗಿ ಪರೀಕ್ಷಾ ಸಾಮರ್ಥ್ಯದ ಗುರಿಯನ್ನು ಸರ್ಕಾರ ನಿಗದಿಪಡಿಸಲಿದೆ. ಆದಷ್ಟು ಶೀಘ್ರದಲ್ಲಿ ಪರೀಕ್ಷಾ ಸಾಮರ್ಥ್ಯ ದ್ವಿಗುಣಗೊಳಿಸಿಕೊಳ್ಳಲು ಮುಂದಾಗಿದೆ.

ಸರ್ಕಾರ ತನ್ನ ಗುರಿ ಮುಟ್ಟಿದಲ್ಲಿ ಒಂದು ವಾರಕ್ಕೆ 3.5 ಲಕ್ಷ ಅಂದರೆ ತಿಂಗಳಿಗೆ 14 ಲಕ್ಷ ಜನರ ತಪಾಸಣೆ ಮಾಡುವ ಸಾಮರ್ಥ್ಯವನ್ನು ರಾಜ್ಯ ಹೊಂದಲಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮುಂದಾಗಿದ್ದು ಇಲಾಖೆಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಕಟ್ಟುನಿಟ್ಟಿನ ಕ್ರಮದೊಂದಿಗೆ ಗುರಿಯತ್ತಾ ಸಾಗಲು ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ್ದಾರೆ.

ಪರೀಕ್ಷಾ ಸಾಮರ್ಥ್ಯ ವೃದ್ಧಿ ವಿವರ:

  • ಏಪ್ರಿಲ್-7 : 500
  • ಏಪ್ರಿಲ್-13: 1,000
  • ಏಪ್ರಿಲ್-17: 2,000
  • ಏಪ್ರಿಲ್-22: 3,000
  • ಏಪ್ರಿಲ್-28: 4,000
  • ಮೇ- 04 : 5,000
  • ಮೇ- 14 : 6,000
  • ಮೇ- 14 : 7,000
  • ಮೇ- 20 : 8,000
  • ಮೇ -22 : 12,000
  • ಜೂ- 30 : 15,000
  • ಜುಲೈ-01: 20,000
  • ಜುಲೈ-05: 25,000

ABOUT THE AUTHOR

...view details