ಬೆಂಗಳೂರು:ಕೊರೊನಾ ರೂಪಾಂತರ ವೈರಾಣು ಭೀತಿ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ವರ್ಚುವಲ್ ಸಭೆ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ನೀಡಿದೆ.
ಬ್ರಿಟನ್ನಲ್ಲಿ ಕೊರೊನಾ ರೂಪಾಂತರ ವೈರಾಣು ಪತ್ತೆಯಾದ ನಂತರ ರಾಜ್ಯಕ್ಕೆ ಬ್ರಿಟನ್ನಿಂದ ಪ್ರಯಾಣಿಕರು ಆಗಮಿಸಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎನ್ನುವ ಕುರಿತು ವರದಿ ನೀಡಲು ಕೋವಿಡ್ ತಾಂತ್ರಿಕ ಸಲಹಾ ಸಮಿತಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಸೂಚನೆ ನೀಡಿದ್ದರು. ಅದರಂತೆ ವಿಡಿಯೋ ಕಾನ್ಸರೆನ್ಸ್ ಮೂಲಕ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸುದರ್ಶನ್, ವೈರಾಣು ತಜ್ಞ ಡಾ. ರವಿ, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್, ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ಮತ್ತಿತರ ಸದಸ್ಯರ ಜೊತೆ ಸಭೆ ನಡೆಸಿದರು.
ರೂಪಾಂತರ ವೈರಾಣು ಹಬ್ಬುವಿಕೆ ತೀವ್ರವಾಗಿದೆ, ಹಾಗಾಗಿ ಕೋವಿಡ್ ಮಾರ್ಗಸೂಚಿಯಂತೆ ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಆಗಾಗ ಕೈಗಳಿಗೆ ಸ್ಯಾನಿಟೈಸರ್ ಹಾಕುವುದನ್ನು ತಪ್ಪದೆ ಪಾಲಿಸಬೇಕು. ಇರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ವರದಿ ನೀಡಿದೆ.