ಬೆಂಗಳೂರು: ಕೋವಿಡ್ ಸಂಬಂಧ ಸಿಎಂ ಬಿಎಸ್ವೈ ಅವರು ನಿನ್ನೆ ನನ್ನನ್ನು ಮತ್ತು ಮುಖ್ಯಕಾರ್ಯದರ್ಶಿ ಅವರನ್ನು ಕರೆದು ಮಾತನಾಡಿದ್ದಾರೆ. ಇಂದು ಕೋವಿಡ್ ಮಾರ್ಗಸೂಚಿ ಹೊರಡಿಸುತ್ತಾರೆ. ಮಾರ್ಗಸೂಚಿಯಲ್ಲಿ ಎಲ್ಲದಕ್ಕೂ ಸ್ಪಷ್ಟನೆ ಸಿಗಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದರು.
ಸದಾಶಿವನಗರದ ನಿವಾಸದೆದುರು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಳೆದ ಎರಡು ದಿನದಿಂದ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಹಾಗಾಗಿ ಇಂದು ಕೋವಿಡ್ ಮಾರ್ಗಸೂಚಿ ಬಿಡುಗಡೆಗೊಳ್ಳಲಿದೆ ಎಂದರು. ಮಾನ್ಯ ಶಿಕ್ಷಣ ಸಚಿವರು ಮಾತನಾಡಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಮತ್ತು ನಾನು ಕೊಟ್ಟಿರುವ ಸಲಹೆ ಮೇರೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ನಿನ್ನೆಯಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುತ್ತಿದೆ. ನಿನ್ನೆ ಒಂದೇ ದಿನ 34 ಸಾವಿರ ಜನರು ಲಸಿಕೆ ಪಡೆದಿದ್ದಾರೆ. ಈವರೆಗೂ 41ಲಕ್ಷ ಜನರು ಲಸಿಕೆ ಪಡೆದಿದ್ದಾರೆ. ಇನ್ನೂ ಹೆಚ್ಚು ಜನರು ಮುಂದೆ ಬಂದು ಲಸಿಕೆ ಪಡೆಯಲು ಮನವಿ ಮಾಡುತ್ತೇನೆ. ಅತಿ ಹೆಚ್ಚು ಜನ ಒಂದೆಡೆ ಸೇರುವುದು, ಮಾಸ್ಕ್ ಧರಿಸದಿರೋದು ನಮಗೆ ಹತಾಶೆ ತರಿಸಿದೆ ಎಂದು ಖೇದ ವ್ಯಕ್ತಪಡಿಸಿದರು.