ಬೆಂಗಳೂರು: ದಿನಕ್ಕೆ ಒಂದೆರಡು ಕಡೆ ಬಡವರಿಗೆ ಆಹಾರದ ಕಿಟ್ ವಿತರಿಸುವ ನೆಪದಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಪ್ರಮಾಣದಲ್ಲಿ ಜನರನ್ನ ಸೇರಿಸುತ್ತಿದ್ದು, ಎಲ್ಲಿಯೂ ಕೋವಿಡ್ ನಿಯಮ ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.
ಆಹಾರ ಕಿಟ್ ವಿತರಣೆ ವೇಳೆ ಸಾಮಾಜಿಕ ಅಂತರ ಉಲ್ಲಂಘಿಸಿರುವುದು ಕಳೆದ 15- 20 ದಿನಗಳಿಂದ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಮುಖಂಡರು ಆಹಾರದ ಕಿಟ್ಗಳನ್ನು ಬಡವರಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ. ಜನರ ಸಮಸ್ಯೆ, ಸಂಕಷ್ಟ ಹಾಗೂ ಅಗತ್ಯವನ್ನು ಅರಿತು ಕೈ ನಾಯಕರು ಮಾಡುತ್ತಿರುವ ಕಾರ್ಯ ಅಭಿನಂದನೀಯ. ಆದರೆ, ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಜಮಾವಣೆಗೊಳ್ಳುತ್ತಿದ್ದು, ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸುವ ವಿಚಾರದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಕೇವಲ ಆಹಾರದ ಕಿಟ್ ಪಡೆಯಲು ಮುಗಿ ಬೀಳುತ್ತಿರುವ ಜನ ಮಾಸ್ಕ್ ಅಥವಾ ಸಾಮಾಜಿಕ ಅಂತರದತ್ತ ಗಮನಹರಿಸುತ್ತಿಲ್ಲ. ಈ ಮೂಲಕ ಕಾಂಗ್ರೆಸ್ ಪಕ್ಷದ ಒಂದು ಸಾಮಾಜಿಕ ಕಳಕಳಿ ಕೊರೊನಾ ವ್ಯಾಪಿಸಲು ಕೊಡುಗೆಯ ರೂಪದಲ್ಲಿ ಮಾರ್ಪಡುತ್ತಿರುವುದು ವಿಪರ್ಯಾಸ.
ಆಹಾರ ಕಿಟ್ ಸಮಾರಂಭಕ್ಕೆ ಜನ ಸಾಗರ
ಎಲ್ಲೆಡೆ ಜನಸಂದಣಿ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಸೂಚನೆ ಮೇರೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಹಾಗೂ ರಾಜ್ಯದ ವಿವಿಧೆಡೆ ಆಹಾರದ ಕಿಟ್ ವಿತರಣೆ ಸಮಾರಂಭಕ್ಕೆ ತೆರಳುತ್ತಿದ್ದಾರೆ. ಬೆಂಗಳೂರು ನಗರದ ಹಾಗೂ ರಾಜ್ಯದ ವಿವಿಧ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸ್ಥಳೀಯವಾಗಿ ಆಯೋಜಿಸುತ್ತಿರುವ ಈ ಕಾರ್ಯಕ್ರಮಗಳಿಗೆ ರಾಜ್ಯ ನಾಯಕರು ಭೇಟಿ ನೀಡುತ್ತಿದ್ದಾರೆ. ಈ ಸಂದರ್ಭ ಭಾರಿ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಜನಪ್ರಿಯತೆ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಇಂದು ಮಲ್ಲೇಶ್ವರ, ರಾಜಾಜಿನಗರ ಹಾಗೂ ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಆಹಾರದ ಕಿಟ್ ವಿತರಣೆ ಸಮಾರಂಭದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು ಕಂಡುಬಂತು. ಮಲ್ಲೇಶ್ವರದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ 500ಕ್ಕೂ ಹೆಚ್ಚು ಮಂದಿ ಜಮಾವಣೆಗೊಂಡಿದ್ದು ಕಂಡು ಬಂತು. ಕಡಿಮೆ ಸಂಖ್ಯೆಯಲ್ಲಿದ್ದ ಆಹಾರದ ಕಿಟ್ ಗಾಗಿ ಸಾಕಷ್ಟು ಜನ ಮುಗಿಬೀಳುತ್ತಿರುವ ಗೋಚರಿಸಿತು.
ಇದೇ ಪರಿಸ್ಥಿತಿ ರಾಜಾಜಿನಗರ ಹಾಗೂ ಗೋವಿಂದರಾಜನಗರ ವ್ಯಾಪ್ತಿಯಲ್ಲೂ ಗೋಚರಿಸಿತು. ಇನ್ನು ಸಿದ್ದರಾಮಯ್ಯ ಚಾಮರಾಜಪೇಟೆಯ ಬಿಬಿಎಂಪಿ ಕೋವಿಡ್ ರೋಗಿಗಳ ಆಸ್ಪತ್ರೆ ಉದ್ಘಾಟನೆಗೆ ತೆರಳಿದ ಸಂದರ್ಭ, ಆಟೋ ಚಾಲಕರಿಗೆ 3000 ರೂ. ಸಹಾಯಧನ ವಿತರಣೆಗೆ ತೆರಳಿದ ಸಂದರ್ಭ, ಕೋಲಾರಕ್ಕೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ತೆರಳಿದ ಸಂದರ್ಭ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ನಾಯಕರು ತೆರಳಿದ ಕಡೆಗಳಲ್ಲೆಲ್ಲ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಜಮಾವಣೆ ಗೊಳಿಸಲಾಗುತ್ತಿದೆ.
ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದನ್ನು ತೋರಿಸುವ ಸಲುವಾಗಿ ರಾಜ್ಯದ ವಿವಿಧೆಡೆ ತೆರಳಿ ಆಹಾರದ ಕಿಟ್ ವಿತರಿಸುತ್ತಿರುವ ಕಾಂಗ್ರೆಸ್ ನಾಯಕರು ಇನ್ನೊಂದೆಡೆ ಕೊರೊನಾ ವ್ಯಾಪಿಸಲು ಸಹ ಪರೋಕ್ಷವಾಗಿ ಕೊಡುಗೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಮದುವೆ ಮತ್ತಿತರ ಸಮಾರಂಭಗಳಿಗೆ ಜನರಿಗೆ ಮಿತಿ ಹೇರಿರುವ ಸರ್ಕಾರ ಕಾಂಗ್ರೆಸ್ ಹಾಗೂ ಕೆಲವೆಡೆ ಬಿಜೆಪಿ ನಾಯಕರು ಸಹ ಫುಡ್ ಕಿಟ್ ವಿತರಣೆ ಹೆಸರಿನಲ್ಲಿ ಜನರನ್ನ ಸೇರಿಸುತ್ತಿದ್ದರೂ ಯಾವುದೇ ನಿರ್ಬಂಧ ವಿಧಿಸದಿರುವುದು ಅಚ್ಚರಿಗೆ ಕಾರಣವಾಗಿದೆ.
ಓದಿ:ಚಿತಾಗಾರದಲ್ಲೇ ಉಳಿದ ಕೋವಿಡ್ ಮೃತದೇಹಗಳ ಚಿತಾಭಸ್ಮ: ಕುಟುಂಬಸ್ಥರಿಂದ ನೋ ರೆಸ್ಪಾನ್ಸ್!