ಬೆಂಗಳೂರು : ಕೊರೊನಾ ಸೋಂಕಿನಿಂದ ಮೃತಪಟ್ಟ ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯ ಎಎಸ್ಐ ಜೊತೆ ಸಂಪರ್ಕ ಹೊಂದಿದ್ದ ಮತ್ತೋರ್ವ ಎಎಸ್ಐಗೆ ಸೋಂಕು ತಗುಲಿದೆ. ಹೀಗಾಗಿ ಠಾಣೆಯ ಇನ್ಸ್ಪೆಕ್ಟರ್ ಸೇರಿದಂತೆ 62 ಜನ ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.
ಬೆಂಗಳೂರಲ್ಲಿ ಮತ್ತೊಬ್ಬ ಎಎಸ್ಐಗೆ ಪಾಸಿಟಿವ್ : 62 ಸಿಬ್ಬಂದಿ ಕ್ವಾರಂಟೈನ್ - Corona infection to police in Bengaluru
ಸಿಲಿಕಾನ್ ಸಿಟಿಯಲ್ಲಿ ಮತ್ತೋರ್ವ ಎಎಸ್ಐಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಇತ್ತೀಚೆಗೆ ಮೃತಪಟ್ಟಿದ್ದ ಸಂಚಾರಿ ಎಎಸ್ಐನಿಂದ ಸೋಂಕು ತಗುಲಿದೆ.
ಸೋಂಕು ತಗುಲಿರುವ 57 ವರ್ಷದ ಎಎಸ್ಐ ಅನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಸೋಂಕಿತ ಎಎಸ್ಐ ಇತ್ತೀಚೆಗೆ ಮೃತಪಟ್ಟಿದ್ದ ಎಎಸ್ಐ ಜೊತೆ ಸಂಪರ್ಕ ಹೊಂದಿದ್ದರು. ಅಲ್ಲದೇ, ಕಂಟೇನ್ಮೆಂಟ್ ಝೋನ್ಗಳಲ್ಲಿ ಕಾರ್ಯನಿರ್ವಹಿಸಿದ್ದರು. 2 ದಿನದ ಹಿಂದೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆತಂಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರು:ಸೋಂಕು ವ್ಯಾಪಿಸಿರುವ ಪ್ರದೇಶಗಳಲ್ಲಿ ಹಗಲು ರಾತ್ರಿ ಎನ್ನದೇ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ 15 ಜನರಿಗೆ ಪಾಸಿಟಿವ್ ಬಂದಿದೆ, ಓರ್ವ ಸಿಬ್ಬಂದಿ ಮೃತಪಟ್ಟಿದ್ದಾರೆ. 520 ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ. ಹೀಗಾಗಿ ಕರ್ತವ್ಯದಲ್ಲಿರುವ ಪೊಲೀಸರು ಭಯಭೀತರಾಗಿದ್ದಾರೆ.