ಬೆಂಗಳೂರು: ಒಂದೆಡೆ ಕೋವಿಡ್ ವೈರಸ್ ಜಗತ್ತನ್ನೇ ತಲ್ಲಣಗೊಳಿಸಿರುವ ಸಂದರ್ಭದ ನಡುವೆಯೇ ವಿಶ್ವ ಏಡ್ಸ್ ದಿನ ಬಂದಿದೆ. ಈ ನಡುವೆ ಕೋವಿಡ್ ಸಂಕಷ್ಟ ಕಾಲ ಹೆಚ್ ಐವಿ ಸೋಂಕಿತರಿಗೂ ಸವಾಲಿನ ದಿನಗಳಾಗಿವೆ.
ಈ ವರೆಗೆ ರಾಜ್ಯದಲ್ಲಿ 280 ಹೆಚ್ ಐವಿ ಸೋಂಕಿತರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದರಲ್ಲಿ 5 ಜನ ಗುಣಮುಖರಾಗದೆ ಮೃತಪಟ್ಟಿದ್ದಾರೆ. ಸಾಮಾನ್ಯ ಜನರಿಗಿಂತ ಹೆಚ್ಐವಿ ಸೋಂಕಿತರಿಗೆ ಕೋವಿಡ್ ಹೆಚ್ಚು ರಿಸ್ಕ್ ತಂದೊಡ್ಡುತ್ತದೆ. ಮೊದಲೇ ರೋಗನಿರೋಧಕ ಶಕ್ತಿ ಕಡಿಮೆ ಇರುವ ರೋಗಿಗಳಿಗೆ ಕೋವಿಡ್ ಅತಿಹೆಚ್ಚು ತೊಂದರೆ ಉಂಟುಮಾಡಲಿದೆ ಎಂದು ಐಇಸಿಯ ಉಪ ನಿರ್ದೇಶಕರಾದ ಗೋವಿಂದರಾಜು ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.
ಹೀಗಾಗಿ ಕಾಲಕಾಲಕ್ಕೆ ಸಿಡಿ4 (CD4) ತಪಾಸಣೆ ಮಾಡಿಕೊಳ್ಳಬೇಕು. ಜೊತೆಗೆ ಹೆಚ್ಐವಿ ಸೋಂಕಿತರ ಆಂಟಿರೆಟ್ರೋ ವೈರಲ್ (ART) ಚಿಕಿತ್ಸೆಯೊಂದಿಗೆ ಮಲ್ಟಿವಿಟಮಿನ್ ಮಾತ್ರೆಗಳನ್ನು ನೀಡಲಾಗುತ್ತದೆ. ಸೋಂಕಿನ ಲಕ್ಷಣಗಳಿದ್ದರೆ ಲಕ್ಷಣಕ್ಕೆ ಅನುಗುಣವಾಗಿ ಮಾತ್ರೆಗಳನ್ನು ನೀಡಲಾಗುತ್ತದೆ ಎಂದರು.
ಐಇಸಿಯ ಉಪ ನಿರ್ದೇಶಕರಾದ ಗೋವಿಂದರಾಜು ರಾಜ್ಯದಲ್ಲಿ ಐದು ಲಕ್ಷ ಹೆಚ್ಐವಿ ಸೋಂಕಿತರಿದ್ದು, ಪ್ರಸ್ತುತ 1 ಲಕ್ಷದ 90 ಸಾವಿರ ಜನ ಸರ್ಕಾರಿ ಆಸ್ಪತ್ರೆಗಳ ಸೌಲಭ್ಯದಡಿ ಔಷಧಿ ತೆಗೆದುಕೊಳ್ಳುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಆಸ್ಪತ್ರೆಗಳಿಗೆ ಓಡಾಡದಂತೆ, ಮನೆಗೇ ಔಷಧಿಗಳನ್ನು ತಲುಪಿಸಲಾಗುತ್ತಿತ್ತು ಎಂದು ಗೋವಿಂದರಾಜು ತಿಳಿಸಿದರು.
ಕೋವಿಡ್ ಲಕ್ಷಣಗಳು ಕಂಡುಬಂದರೆ ಕೂಡಲೇ ಹತ್ತಿರದ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹೆಚ್ಚು ಓಡಾಟ ಮಾಡದೇ ಮನೆಯಲ್ಲೇ ಉಳಿದುಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ 1097 ಕ್ಕೆ ಕರೆ ಮಾಡಿಯೂ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.