ಬೆಂಗಳೂರು:ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಇಂದು ಮಹತ್ವದ ಕೋವಿಡ್ ಸಭೆ ನಡೆಯಲಿದ್ದು, ನೈಟ್ ಕರ್ಫ್ಯೂ ಸಡಿಲಿಕೆ ಸೇರಿದಂತೆ ಬೆಂಗಳೂರಲ್ಲಿ ಶಾಲಾರಂಭದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಮಧ್ಯಾಹ್ನ 1 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಲಿದ್ದು, ಕೋವಿಡ್ ತಜ್ಞರು, ಸಚಿವರು, ಹಿರಿಯ ಅಧಿಕಾರಿಗಳ ಜತೆ ಕೋವಿಡ್ ಸ್ಥಿತಿಗತಿ, ನಿರ್ಬಂಧಗಳ ಸಡಿಲಿಕೆ ಸಂಬಂಧ ಚರ್ಚೆ ನಡೆಯಲಿದೆ. ಸದ್ಯ ಜಾರಿಯಲ್ಲಿರುವ ಶೇ 50ರಷ್ಟು ರೂಲ್ಸ್ಗೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಹೋಟೆಲ್ ಉದ್ಯಮ, ಮದ್ಯ ಮಾರಾಟ ಉದ್ಯಮ, ಸಿನಿಮಾ, ನಾಟಕ ರಂಗಗಳಿಂದ ವಿರೋಧ ವ್ಯಕ್ತವಾಗಿದೆ.
ಓದಿ:ಏರ್ಟೆಲ್ನಲ್ಲಿ ಒಂದು ಬಿಲಿಯನ್ ಡಾಲರ್ ಹೂಡಿಕೆ ಮಾಡಿದ ಗೂಗಲ್
ಜಿಲ್ಲಾವಾರು ಶೇ50ರಷ್ಟು ರೂಲ್ಸ್ ತೆಗೆಯುವಂತೆ ಬಹುತೇಕ ಸಚಿವರು, ಶಾಸಕರಿಂದಲೂ ಒತ್ತಾಯ ಕೇಳಿ ಬಂದಿದೆ. ಇಂದಿನ ಸಭೆಯಲ್ಲಿ ಶೇ 50ರ ರೂಲ್ಸ್ ಸಡಿಲಿಕೆ ಅಥವಾ ತೆರವು ಕುರಿತು ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಇದರ ಜತೆಗೆ ನೈಟ್ ಕರ್ಫ್ಯೂ ಅವಧಿ ಕಡಿತಕ್ಕೂ ಒತ್ತಾಯ ಹಲವು ದಿನಗಳಿಂದ ಕೇಳಿ ಬರುತ್ತಿದೆ. ಹೀಗಾಗಿ ನೈಟ್ ಕರ್ಫ್ಯೂ ಅವಧಿ ಕಡಿತ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ತಜ್ಞರು ನೀಡಿರುವ ವರದಿ ಆಧಾರದಲ್ಲಿ ಕೆಲ ನಿರ್ಬಂಧ ಸಡಿಲಿಸುವ ಸಾಧ್ಯತೆ ಬಹುತೇಕ ಹೆಚ್ಚಿದೆ. ಇತ್ತ ಕೊರೊನಾ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಇನ್ನಷ್ಟು ಸಡಿಲಿಕೆ ಮಾಡುವ ಸಾಧ್ಯತೆ ಇದೆ. ಉಳಿದಂತೆ ಸಭೆ, ಸಮಾರಂಭ, ಸಮಾವೇಶಗಳಿಗೆ ಜನರ ಮಿತಿ ಕೆಲ ದಿನ ಮುಂದುವರಿಯುವ ಸಾಧ್ಯತೆ ಇದೆ.
ಓದಿ:Punjab Polls: ಪಂಜಾಜ್ ಚುನಾವಣೆಯಲ್ಲಿ ಇದೊಂದು ಭಾಗದಲ್ಲಿ ಗೆದ್ದರೆ ಅಧಿಕಾರ ಶತಸಿದ್ಧ..
ಶಾಲೆ ಪುನರಾರಂಭದ ನಿರ್ಧಾರ ಸಾಧ್ಯತೆ:ಬೆಂಗಳೂರಲ್ಲಿ ಬೌತಿಕ ತರಗತಿ ಪ್ರಾರಂಭಿಸುವ ಬಗ್ಗೆ ಇಂದಿನ ಸಬೆಯಲ್ಲಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಶಾಲಾ ಒಕ್ಕೂಟಗಳಿಂದ ಈ ಸಂಬಂಧ ಬಲವಾದ ಕೂಗಿ ಕೇಳಿ ಬರುತ್ತಿವೆ. ಶಿಕ್ಷಣ ಇಲಾಖೆಯೂ ಶಾಲೆ ಪುನಾರಂಭದ ಪರವಾಗಿದೆ. ಇತ್ತ ತಜ್ಞರ ಸಮಿತಿಯೂ ಷರತ್ತುಬದ್ಧ ಭೌತಿಕ ತರಗತಿ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದೆ.
ಕಳೆದ ಬಾರಿ ನಡೆದ ಸಭೆಯಲ್ಲಿ ತಜ್ಞರ ವರದಿ ಆಧರಿಸಿ ಬೆಂಗಳೂರಲ್ಲಿ ಶಾಲೆ ಆರಂಭಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವುದಾಗಿ ಸಿಎಂ ತಿಳಿಸಿದ್ದರು. ಇದೀಗ ತಜ್ಞರು ಭೌತಿಕ ತರಗತಿ ಆರಂಭಕ್ಕೆ ಸಹಮತ ವ್ಯಕ್ತಪಡಿಸಿದೆ. ಹೀಗಾಗಿ ಇಂದು ನಡೆಯಲಿರುವ ಸಿಎಂ ನೇತೃತ್ವದ ಸಭೆಯಲ್ಲಿ ಬೆಂಗಳೂರಿನಲ್ಲಿ ಶಾಲೆ ಪುನರಾರಂಭದ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಹೆಚ್ಚಿದೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ