ಬೆಂಗಳೂರು: ಕೋವಿಡ್ ನಿರ್ವಹಣೆಗಾಗಿ ಎಸ್.ಡಿ.ಆರ್.ಎಫ್. ಹಣವನ್ನು ಪ್ರತಿ ಗ್ರಾಮ ಪಂಚಾಯಿತಿಗಳಿಗೆ 50,000 ರೂ.ನಂತೆ ಮುಂಗಡವಾಗಿ ನೀಡಲಾಗುವುದು. ಇದರಿಂದ 6,000 ಗ್ರಾಮ ಪಂಚಾಯಿತಿಗಳಿಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸೋಂಕಿತ ರೋಗಿಗಳಿಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸರ್ಕಾರದಿಂದ ನಿಯೋಜಿಸಿರುವ (ಖಾಸಗಿ ಮತ್ತು ಸರ್ಕಾರಿ) ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನಿಡಲಾಗುತ್ತಿದೆ. ಕೋವಿಡ್ 1 ಮತ್ತು 2ನೇ ಅಲೆಯಲ್ಲಿ ಒಟ್ಟಾಗಿ ಇಲ್ಲಿಯವರೆಗೆ 2.06 ಲಕ್ಷ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 956 ಕೋಟಿ ರೂ.ಗಳಿಗೂ ಹೆಚ್ಚು ಖರ್ಚು ಭರಿಸಲಾಗುತ್ತಿದೆ. 18ರಿಂದ 45 ವರ್ಷದೊಳಗಿನ ಎಲ್ಲಾ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಲು ಉದ್ದೇಶಿಸಿದ್ದು, ಈಗಾಗಲೇ 3 ಕೋಟಿ ಡೋಸ್ ಲಸಿಕೆ ಖರೀದಿಗೆ ಆದೇಶ ನೀಡಲಾಗಿದೆ. ಇದಕ್ಕಾಗಿ 1000 ಕೋಟಿ ರೂ. ವೆಚ್ಚ ಭರಿಸಲಾಗುತ್ತಿದೆ ಎಂದರು.
ವೈದ್ಯರ ನೇಮಕ: ಕೋವಿಡ್ ಚಿಕಿತ್ಸೆಗೆ ಅನುಕೂಲವಾಗಲು 2,150 ವೈದ್ಯರನ್ನು 3 ದಿನಗಳೊಳಗಾಗಿ ನೇಮಕಾತಿ ಮಾಡಲಾಗುವುದು. ಲೈನ್ ಮ್ಯಾನ್, ಗ್ಯಾಸ್ ಸಿಲಿಂಡರ್ ಸರಬರಾಜು ಮಾಡುವವರು ಪ್ರೆಂಟ್ ಲೈನ್ ವಾರಿಯರ್ಸ್ ಎಂದು ಘೋಷಿಸಲಾಗಿದ್ದು, ಅಗತ್ಯಕ್ಕೆ ತಕ್ಕಂತೆ ಅವರಿಗೆ ವ್ಯಾಕ್ಸಿನ್ ನೀಡಲಾಗುವುದು. ಹಣಕಾಸು ಪರಿಸ್ಥಿತಿ ಸರಿ ಇಲ್ಲದಿದ್ದರೂ ಪ್ಯಾಕೇಜ್ ಘೋಷಣೆ ಮಾಡುತ್ತಿದ್ದೇವೆ ಎಂದ ಸಿಎಂ, ವಿದ್ಯುತ್, ವಾಟರ್ ಬಿಲ್ ಬಗ್ಗೆ ಯಾವ ನಿರ್ಧಾರವಿಲ್ಲ ಎಂದರು.
ಲಾಕ್ಡೌನ್ ವಿಸ್ತರಣೆ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ: ಲಾಕ್ಡೌನ್ ವಿಸ್ತರಣೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಮೇ 24ರವರೆಗೂ ಸಮಯ ಇದೆ. ಮೇ 23ರಂದು ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಬಿಎಸ್ವೈ ತಿಳಿಸಿದರು.
ಜಾಗತಿಕ ಮಟ್ಟದ ಟೆಂಡರ್: ಎರಡು ಕೋಟಿ ಲಸಿಕೆ ಖರೀದಿಗಾಗಿ ಜಾಗತಿಕ ಮಟ್ಟದ ಟೆಂಡರ್ ಕರೆಯಲಾಗಿದೆ. ಇನ್ನೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಕೊನೆ ದಿನಾಂಕ ಅಂತಿಮಗೊಳಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಲಸಿಕೆ ಪೂರೈಸಲು ಮುಂದೆ ಬರುವ ಕಂಪನಿಗಳ ಜೊತೆ ಮಾತುಕತೆ ನಡೆಸಿ ಲಸಿಕೆ ಖರೀದಿ ಮಾಡಲಾಗುವುದು. ಈ ವಿಷಯದಲ್ಲಿ ಕೇಂದ್ರ ಸರ್ಕಾರದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು.
ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಮಾತನಾಡಿ, ರಾಜ್ಯ ಸರ್ಕಾರದ ನಿಧಿಯಿಂದಲೇ ಲಸಿಕೆ ಖರೀದಿ ಮಾಡುತ್ತಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಹೇಳಿದರು. ಪಾಸಿಟಿವಿಟಿ ದರ ಕಡಿಮೆಯಾಗ್ತಿದೆ. ಸೋಂಕು ಕಡಿಮೆಯಾಗ್ತಿರೋದು ಉತ್ತಮ ಬೆಳವಣಿಗೆ. ಟೆಸ್ಟ್ ಪ್ರಮಾಣ ಕಡಿಮೆ ಮಾಡಿಲ್ಲ. ಕೆಲವೊಂದು ತಾಂತ್ರಿಕ ತೊಂದರೆಯಿಂದ ಕಡಿಮೆ ಆಗಿರಬಹುದು ಎಂದರು.
ಲಸಿಕೆ ಆಸ್ಪತ್ರೆಗಳಲ್ಲೇ ಕೊಟ್ಟರೆ ಸೋಂಕು ಹರಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೇರೆ ಸ್ಥಳಗಳನ್ನ ಗುರ್ತಿಸಿದ್ದೇವೆ. ಕಲ್ಯಾಣ ಮಂಟಪ, ಶಾಲೆ, ಸಮುದಾಯ ಭವನದಲ್ಲಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ ಎಂದು ಹೇಳಿದರು.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, 45ರಿಂದ 60 ವರ್ಷ ವಯಸ್ಸಿನವರಿಗೆ ಲಸಿಕೆ ವಿತರಣೆಗೆ ನಾವು ಪೂರೈಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಉಳಿದ ವಯೋಮಿತಿಯವರಿಗೆ ಬೇಕಾದ ಲಸಿಕೆಯನ್ನು ನೀವೇ ವ್ಯವಸ್ಥೆ ಮಾಡಿಕೊಳ್ಳಿ ಎಂದು ಸೂಚಿಸಿ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದು, ಈ ವಿಷಯದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳ ಇಎಂಐ ತುಂಬುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ಅದನ್ನು ಆರ್ಬಿಐ ತೆಗೆದುಕೊಳ್ಳಬೇಕು. ಕೇಂದ್ರ ಸರ್ಕಾರ ಕೂಡ ತೆಗೆದುಕೊಳ್ಳಲು ಬರಲ್ಲ ಎಂದು ಹೇಳಿದರು. ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ತಡೆಯುವ ವಿಚಾರ ಸಂಬಂಧ ಅಲ್ಲಿಯೇ ಟಾಸ್ಕ್ ಫೋರ್ಸ್ ಕಮಿಟಿ ಮಾಡಿದ್ದೇವೆ. ಟಾಸ್ಕ್ ಫೋರ್ಸ್ ಕಮಿಟಿ ನೋಡಿಕೊಳ್ಳಲಿದೆ. ಸ್ಥಳೀಯ ಪಿಹೆಚ್ಸಿ ವೈದ್ಯರು ಅಲ್ಲಿ ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.